ಮಣ್ಣಿನ ಗಣಪನೆ ಪೂಜಿಸಿ, ವಿಸರ್ಜಿಸಿರಿ : ಸಚಿವ ಖಂಡ್ರೆ

ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣಪ ಮೂರ್ತಿ ಬಳಕೆಗೆ ಅವಕಾಶ ನೀಡಲಾಗುವುದಿಲ್ಲ. ಪೆಂಡಾಲ್‌ಗೆ ಅನುಮತಿ ನೀಡುವ ಮುನ್ನ ಸಮಿತಿಗಳಿಂದ ಪಿಓಪಿ ಗಣಪ ಮೂರ್ತಿ ಬಳಸುವುದಿಲ್ಲವೆಂದು ಮುಚ್ಚಳಿಕೆ ಪಡೆದುಕೊಳ್ಳುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.

ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಶ್ರದ್ಧಾ ಭಕ್ತಿಯಿಂದ ಆಚರಿಸುವ ಹಬ್ಬವು ಪರಿಸರಕ್ಕೆ ಹಾಗೂ ಜಲಚರಗಳಿಗೆ ಮಾರಕವಾಗಬಾರದು. ಪಿಓಪಿ ಮೂರ್ತಿಗಳು ನೀರಲ್ಲಿ ಕರಗದೇ, ವಿಷಕಾರಿ ಅಂಶ ಸೇರಿಸುತ್ತವೆ. ಮಣ್ಣಿನ ಗಣಪ ಮೂರ್ತಿಗಳನ್ನೇ ಪೂಜಿಸಿ, ವಿಸರ್ಜಿಸಬೇಕು” ಎಂದು ಮನವಿ ಮಾಡಿದರು.

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶೇ.90ರಷ್ಟು ಮಣ್ಣಿನ ಗಣಪ ಮೂರ್ತಿಗಳ ಪೂಜೆ ನಡೆಯುತ್ತಿದೆ. “ಅಲ್ಲಿ ಸಾಧ್ಯವಾಗುತ್ತಿರುವುದು ಉಳಿದ ಜಿಲ್ಲೆಗಳಲ್ಲಿ ಏಕೆ ಸಾಧ್ಯವಾಗಬಾರದು? ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಜಾಗೃತಿ ಮೂಡಿಸಬೇಕು” ಎಂದು ಖಂಡ್ರೆ ಅಭಿಪ್ರಾಯಪಟ್ಟರು.

ಗಣೇಶೋತ್ಸವದ ಮೆರವಣಿಗೆಯಲ್ಲಿ 125 ಡೆಸಿಬೆಲ್ ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ರಾತ್ರಿ 8ರಿಂದ 10ರ ಹೊರತಾದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. “ಪರಿಸರಕ್ಕೆ ಹಾನಿ ಮಾಡದ ಹಸಿರು ಪಟಾಕಿ ಮಾತ್ರ ಬಳಸಿ” ಎಂದು ಸಚಿವರು ಕರೆ ನೀಡಿದರು.

ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸುವುದು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಆದರೂ ಬೀದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಾಣಿಸುತ್ತಿದೆ. “ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಹೆಚ್ಚು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.

Related posts