ದೇವಾಲಯಗಳ ಸೇವಾ ಶುಲ್ಕ ಹೆಚ್ಚಳ ; ಸಿದ್ದು ಸರ್ಕಾರದ ವಿರುದ್ಧ ಆಕ್ರೋಶ ಸ್ಫೋಟ

ಬೆಂಗಳೂರು: ರಾಜ್ಯದ ದೇವಾಲಯಗಳ ಸೇವಾ ಶುಲ್ಕ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಮುಜರಾಯಿ ದೇವಸ್ಥಾನಗಳ ಕುರಿತಂತೆ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಪ್ರತಿಪಕ್ಷ ಬಿಜೆಪಿ ಖಂಡಿಸಿದೆ.

ಗಣೇಶ ಚತುರ್ಥಿಯನ್ನು ರಣರಂಗವಾಗಿಸಿದ ಕಾಂಗ್ರೆಸ್ ಸರ್ಕಾರ ಈಗ ನವರಾತ್ರಿ, ದೀಪಾವಳಿಯ ಸಂಭ್ರಮವನ್ನೂ ಹಾಳು ಮಾಡಲು ಮುಂದಾಗಿದೆ. ʼಎʼ ದರ್ಜೆಯ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ದೇವಸ್ಥಾನಗಳಲ್ಲಿ ಸೇವೆಯ ದರವನ್ನು ಏರಿಸುವ ಮೂಲಕ ಹಿಂದೂ ಧರ್ಮೀಯರ ಮೇಲೆ ತನ್ನ ಅಸಹನೆಯನ್ನು ತೋರಿಸಿದೆ ಎಂದು ಬಿಜೆಪಿ ದೂರಿದೆ.

ಹಿಂದೂಗಳು ಸುಮ್ಮನಿದ್ದಾರೆ, ಏನು ಮಾಡಿದರೂ ನಡೆಯುತ್ತದೆ ಎಂದು ಸಿದ್ದರಾಮಯ್ಯ ಸರ್ಕಾರ ಅಹಂಭಾವ ಪ್ರದರ್ಶಿಸುತ್ತಿದೆ. ಕಟೀಲು ದೇವಸ್ಥಾನವೊಂದರಲ್ಲೇ ಅತಿಹೆಚ್ಚು ಜನರು ಭಕ್ತಿಯಿಂದ ಸಮರ್ಪಿಸುವ ಹೂವಿನ ಪೂಜೆಯ ದರವನ್ನು ಬರೋಬ್ಬರಿ 184% ಹೆಚ್ಚಳ ಮಾಡಿರುವುದು, ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಆಶ್ಲೇಷ ಪೂಜೆ, ನಾಗಪ್ರತಿಷ್ಠೆ ಸೇವೆಗಳ ಸೇವಾ ದರವನ್ನೂ ಹೆಚ್ಚಿಸಿರುವುದು ಸರ್ಕಾರದ ಹಿಂದೂ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ‘X’ನಲ್ಲಿ ಬರೆದುಕೊಂಡಿದೆ.

ಲೂಟಿ ಮಾಡಲು ಹಿಂದೂಗಳ ದೇವಸ್ಥಾನವನ್ನೇ ಕಾಂಗ್ರೆಸ್‌ ಸರ್ಕಾರ ಟಾರ್ಗೆಟ್‌ ಮಾಡುವುದೇಕೆ? ಗ್ಯಾರಂಟಿಗಳ ಅನುಷ್ಠಾನಕ್ಕಾಗಿಯೇ ಅಥವಾ ಹಜ್‌ ಯಾತ್ರೆಗಾಗಿಯೇ? ಎಂದು ಬಿಜೆಪಿಯು ಮುಂದಿಟ್ಟಿರುವ ಪ್ರಶ್ನೆಯೂ ಗಮನಸೆಳೆದಿದೆ.

Related posts