‘ಋತುಚಕ್ರ ರಜೆ ನೀತಿ’: ಬಹುಕಾಲದ ಬೇಡಿಕೆ ಈಡೇರಿದೆ ಎಂದ ಪದ್ಮರಾಜ್

ಮಂಗಳೂರು: ಕರ್ನಾಟಕದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರದ ರಜೆ ಎಂದು ವರ್ಷದಲ್ಲಿ ಹನ್ನೆರಡು ದಿನ ರಜೆ ನೀಡಲು ಮುಖ್ಯಮಂತ್ರಿ ಸಿದ್ದರಾಮ್ಯನವರ ನೇತೃತ್ವದ ಸರ್ಕಾರ ಒಪ್ಪಿಗೆ ನೀಡಿರುವುದು ಅಭಿನಂದನೀಯ. ಕರ್ನಾಟಕ ರಾಜ್ಯ ಸರ್ಕಾರ ಹೆಣ್ಣು ಮಕ್ಕಳ ಪರವಾಗಿ ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.

ಸಂಪುಟದ ನಿರ್ಧಾರ ಸ್ವಾಗತಿಸಿರುವ ಪದ್ಮರಾಜ್, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ದುಡಿಯುವ ಎಲ್ಲ ಮಹಿಳೆಯರಿಗೂ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಋತುಚಕ್ರದ ರಜೆ ನೀಡುವುದರಿಂದ ಮಹಿಳೆಯರ ಆರೋಗ್ಯದ ದೃಷ್ಟಿಯಿಂದಲೂ ಇದೊಂದು ಉತ್ತಮ ನಿರ್ಧಾರ ಎಂದಿದ್ದಾರೆ.

ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಎಂಎನ್‌ಸಿ ಮತ್ತು ಇತರೆ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀತಿಯನ್ನು ಜಾರಿಗೆ ತರಲು ಸಚಿವ ಸಂಪುಟ ನಿರ್ಣಯಿಸಿರುವುದರಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದಿರುವ ಅವರು, ಸದಾ ಮಹಿಳೆಯರ ಪರ ಧ್ವನಿಯೆತ್ತುತ್ತಿರುವ, ಮಹಿಳೆಯರ ಪರ ಕಾಳಜಿ ವಹಿಸುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರ ಈ ನಿರ್ಧಾರವು ಮಾದರಿಯಾಗಿದೆ ಎಂದಿದ್ದಾರೆ.

ಋತುಚಕ್ರದ ರಜೆ ನೀತಿಗಾಗಿ ಹಲವಾರು ವರ್ಷಗಳಿಂದ ಬೇರೆ ಬೇರೆ ಸಂಘಟನೆಗಳು ಹೋರಾಟ ನಡೆಸುತ್ತಾ ಬರುತಿತ್ತು. ಇದೀಗ ಅವರ ಹೋರಾಟಕ್ಕೂ ಪ್ರತಿಫಲ ಸಿಕ್ಕಿದಂತಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Related posts