ಅಫ್ಘಾನಿಸ್ಥಾನ ಸಚಿವರ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿರ್ಬಂಧ; ಪ್ರಧಾನಿ ಮೌನವೇಕೆ ಎಂದ ಕಾಂಗ್ರೆಸ್

ಮಂಗಳೂರು (ಕರ್ನಾಟಕ): ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ಥಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ವಿದೇಶಾಂಗ ಸಚಿವ ಜೈಶಂಕರ್ ಜತೆ ದ್ವಿಪಕ್ಷೀಯ ಮಾತುಕತೆ ಬಳಿಕ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ವೇಳೆ ಮಹಿಳಾ ಪತ್ರಕರ್ತರ ಪಾಲ್ಗೊಳ್ಳುವಿಕೆಗೆ ನಿರ್ಬಂಧ ಹೇರಿರುವುದು ಆಘಾತಕಾರಿ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.

ಮಾಧ್ಯಮ ಹೇಳಿಕೆಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪದ್ಮರಾಜ್ ಆರ್. ಪೂಜಾರಿ, ಭಾರತೀಯರಾದ ನಾವು ಮಹಿಳೆಯರನ್ನು ಪೂಜನೀಯ ಭಾವನೆಯಿಂದ ನೋಡುತ್ತಿದ್ದೇವೆ. ಪ್ರತೀ ಕ್ಷೇತ್ರದಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳಿವೆ. ಆದರೆ ಭಾರತದಲ್ಲೂ ತಾಲಿಬಾನಿ ನೀತಿ ಅನುಸರಿಸಿದ್ದು ಖಂಡನೀಯ ಎಂದಿದ್ದಾರೆ.

ಮಹಿಳಾ ಸ್ವಾತಂತ್ರ್ಯ ಬಗ್ಗೆ ಮಾತನಾಡುವ ಪ್ರಧಾನಿ‌ ನರೇಂದ್ರ ಮೋದಿಯವರು ಈಗ ತಾರತಮ್ಯ ಆಗಿದ್ದರೂ ಮೌನ ವಹಿಸಿರುವುದು ಅನುಮಾನ ಹುಟ್ಟಿಸುವಂತಿದೆ ಎಂದು ಪದ್ಮರಾಜ್ ಹೇಳಿದ್ದಾರೆ. ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ತಾಲಿಬಾನಿ ಮನಸ್ಥಿತಿಯ ಸರ್ಕಾರ ಎಂದು ಟೀಕಿಸುತ್ತಿದ್ದ ಬಿಜೆಪಿಯವರು, ಈಗ ಇವರ ಮನಸ್ಥಿತಿ ಏನು ಎಂಬುದು ಜನತೆಗೆ ತಿಳಿಯುವಂತಾಗಿದೆ ಎಂದವರು ಹೇಳಿದ್ದಾರೆ.

ಅಫ್ಘಾನ್ ಸ್ತ್ರೀಯರಿಗೆ ಶಿಕ್ಷಣ, ಉದ್ಯೋಗದಿಂದ ವಂಚಿತರನ್ನಾಗಿಸಿರುವ ತಾಲಿಬಾನ್ ಆಡಳಿತವು ತನ್ನ ಕೆಟ್ಟ ಮನಃಸ್ಥಿತಿಯನ್ನು ಭಾರತದಲ್ಲೂ ಪ್ರದರ್ಶಿಸಿರುವ ಬಗ್ಗೆ ಕೂಡಲೇ ಪ್ರಧಾನಿಯವರು ಮೌನ ಮುರಿಯಲಿ ಎಂದು ಒತ್ತಾಯಿಸಿರುವ ಪದ್ಮರಾಜ್, ಸಂವಿಧಾನದ ನಾಲ್ಕನೇ ಅಂಗ ಎನ್ನುವ ಮಾಧ್ಯಮ ಪ್ರತಿನಿಧಿಗಳಿಗೆ ಇಂತಹ ಪರಿಸ್ಥಿತಿಯಾದರೆ ಮುಂದಿನ ದಿನಗಳಲ್ಲಿ ನಾವು ಯಾವ ಸ್ಥಿತಿಗೆ ತಲುಪಬಹುದು? ಈ ಬಗ್ಗೆ ಪ್ರಧಾನಿ ಮೋದಿಯವರು ಉತ್ತರಿಸಲಿ ಎಂದು ಒತ್ತಾಯಿಸಿದ್ದಾರೆ.

Related posts