ಬಿಜೆಪಿ ಆಡಳಿತವಿರುವ ರಾಜ್ಯಗಳಿಗಿಂತ ಕರ್ನಾಟಕದ ಸಾರಿಗೆ ವ್ಯವಸ್ಥೆಯೇ ಮೇಲು; ರಾಮಲಿಂಗಾ ರೆಡ್ಡಿ

ಬೆಂಗಳೂರು: ರಾಜ್ಯದ ಸಾರಿಗೆ ವ್ಯವಸ್ಥೆ ಬಗ್ಗೆ ಟೀಕಿಸಿರುವ, ಅದರಲ್ಲೂ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಉದ್ಯಮಿ ಮೋಹನದಾಸ್ ಪೈ ಅವರನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕರ್ನಾಟಕದ ಸಾರಿಗೆ ನಿಗಮಗಳ ಸುಧಾರಣೆ ಬಗ್ಗೆ ಅಂಕಿಅಂಶಗಳನ್ನು ಮುಂದಿಟ್ಟಿರುವ ರಸಚಿವ ರಾಮಲಿಂಗಾ ರೆಡ್ಡಿ, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಗುಜರಾತ್, ರಾಜಸ್ಥಾನ, ಒಡಿಶಾಗಳಲ್ಲಿ ಪ್ರತಿ ಸಾವಿರ ಜನರಿಗೆ ಲಭ್ಯವಿರುವ ಬಸ್ಸುಗಳ ಸಂಖ್ಯೆ ಕಡಿಮೆಯಿದೆ. ಕರ್ನಾಟಕ ಆ ಎಲ್ಲಾ ರಾಜ್ಯಗಳಿಗಿಂತ ಪ್ರಗತಿ ಸಾಧಿಸಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಉದ್ಯಮಿ ಮೋಹನದಾಸ್ ಪೈ ಅವರ ಟೀಕೆಗಳಿಗೆ ತಮ್ಮದೇ ಶೈಲಿಯಲ್ಲಿ ಎದಿರೇಟು ನೀಡಿದರು. ಬೆಂಗಳೂರು ನಗರದ ಜೀವನಾಡಿಯಾಗಿರುವ ಬಿಎಂಟಿಸಿಯು ಪ್ರತಿದಿನ 48 ಲಕ್ಷ ಜನರಿಗೆ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಬೆಂಗಳೂರು ನಗರದಲ್ಲಿ ಬಿಎಂಟಿಸಿ ಜೊತೆಗೆ ಮೆಟ್ರೋ, ಆಟೋ, ಓಲಾ, ಉಬರ್ ಗಳು ಸೇವೆ ಒದಗಿಸುತ್ತಿವೆ. ಬೆಂಗಳೂರು ಜನಸಂಖ್ಯೆ ಅಂದಾಜು 1.44 ಕೋಟಿ, ಬಿಎಂಟಿಸಿ ಬಸ್ಸುಗಳನ್ನು ನಗರದ ಸುಮಾರು 1/3 ನೇ ಭಾಗದಷ್ಟು ಜನರು ಬಳಸುತ್ತಿದ್ದಾರೆ ಎಂದವರು ಗಮನಸೆಳೆದರು.

ಸಾರ್ವಜನಿಕ ಸಾರಿಗೆ ಎನ್ನುವುದು (Welfare State) ಕಲ್ಯಾಣ ರಾಜ್ಯದ ಪರಿಕಲ್ಪನೆಯಾಗಿದ್ದು, ಸರ್ಕಾರವು ಸಾರ್ವಜನಿಕ ಸಾರಿಗೆಯನ್ನು ಉಳಿಸಿ ಬೆಳೆಸಿಕೊಂಡು ಮುನ್ನಡೆಸುವ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದೆ ಎಂದ ಅವರು, ಸಾರ್ವಜನಿಕ ಸಾರಿಗೆಯಲ್ಲಿ ಒಂದೂ ದಿನವೂ ಓಡಾಡದೇ, ಅದರ ಅನುಭವವೂ ಪಡೆಯದೆ, ಸಮಾಜದ ಎಲ್ಲಾ ಸಮಸ್ಯೆಗಳಿಗೂ ಇವರೇ ಸೂಕ್ತ ಪರಿಹಾರ ನೀಡುವವರು ಎಂದು ತಪ್ಪಾಗಿ ಭಾವಿಸಿರುವ, ಸಂಸದ ತೇಜಸ್ವಿ ಸೂರ್ಯ ಮತ್ತು ಮೋಹನ್ ದಾಸ್ ಪೈ ರವರು ಖಾಸಗಿ ಕಂಪನಿಯಾದ “MovelnSync” ರವರ ಹಿಂದೆ ಇರುವ ಕಾಣದ ಕೈಗಳು ಯಾವುದು ಎನ್ನುವುದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಖಾಸಗಿ ಕಂಪನಿ ಆಯೋಜಿಸಿದ್ದ ಸಿಂಪೋಸಿಯಮ್ ನಲ್ಲಿ ಬಿಎಂಟಿಸಿ ಬಗ್ಗೆ ‘No more BMTC, No more Monopoly’ ಎಂದು ಭಾಷಣ ಬಿಗಿಯುವುದು ನಾಚಿಕೆಗೇಡು ಎಂದ ರಾಮಲಿಂಗಾ ರೆಡ್ಡಿ, ಬಿಎಂಟಿಸಿ ಬಸ್ಸನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವವರು ಕಾರ್ಮಿಕರು, ಉದ್ಯೋಗಸ್ಥರು, ಬಡವರು, ದುರ್ಬಲರು, ಮಧ್ಯಮ ವರ್ಗದವರು. ಅವರ ಬಗ್ಗೆ ಈ ವ್ಯಕ್ತಿಗಳು ಹೊಂದಿರುವ ಕೊಳಕು ಮತ್ತು ಬಂಡವಾಳಶಾಹಿ ಮನಸ್ಥಿತಿಗೆ ಹಿಡಿದ ಕೈಗನ್ನಡಿ ಇದು. ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಮತ್ತು ಮೋಹನ್ ದಾಸ್ ಪೈ ರವರ ಮಾತುಗಳಿಂದ ಉಳ್ಳವರು ಯಾವಾಗಲೂ ದೀನದಲಿತರು, ದುರ್ಬಲರು, ಅಸಹಾಯಕರ ಮೇಲೆ ಅಸಹನೆ, ಅಹಂಕಾರ, ದರ್ಪ ತೋರಿಸುತ್ತಾರೆ ಎಂಬುದು ಜಗಜಾಹೀರಾಗಿದೆ ಎಂದು ಬಣ್ಣಿಸಿದರು.

ಖಾಸಗಿಯವರು ಬಸ್ಸುಗಳ ಕಾರ್ಯಾಚರಣೆಯನ್ನು ಸೇವೆಯಾಗಿ ಪರಿಗಣಿಸುವುದಿಲ್ಲ. ವ್ಯಾಪಾರ/ವ್ಯವಹಾರವಾಗಿ ನೋಡುತ್ತಾರೆ. ಯಾವ ಮಾರ್ಗದಲ್ಲಿ ಲಾಭ ಬರುತ್ತದೆಯೋ ಅಲ್ಲಿ ಮಾತ್ರ ಬಸ್ಸುಗಳ ಕಾರ್ಯಾಚರಣೆ ಮಾಡುತ್ತಾರೆ. ಜಗತ್ತಿನ ಯಾವುದೇ ಸಾರ್ವಜನಿಕ ಸಾರಿಗೆಯು ಲಾಭದ ದೃಷ್ಟಿಯಿಂದ ನಡೆಸುತ್ತಿಲ್ಲ. ಸರ್ಕಾರದಿಂದ ಸಾರ್ವಜನಿಕ ಸಾರಿಗೆಗೆ ದೊರಕುವ ಪ್ರೋತ್ಸಾಹ ಹಾಗೂ ಸೌಲಭ್ಯಗಳಿಂಧ ಸಾರ್ವಜನಿಕರಿಗೆ ನೀಡುವ ಸೇವೆಯೆಂದು ಪರಿಗಣಿಸುತ್ತಾರೆ ಎಂದು ಸಚಿವರು ವಿವರಿಸಿದರು.

Beyond Free Rides ಎಂಬ ಹೆಸರಿನಲ್ಲಿ Sustainable Mobility Network ರವರು ದೇಶದ 10 ನಗರಗಳಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಬಗ್ಗೆ ನಡೆಸಿರುವ ಅಧ್ಯಯನದ ವರದಿಯು ಬೆಂಗಳೂರಿನಲ್ಲಿ 23% ಮತ್ತು ಹುಬ್ಬಳ್ಳಿ ಧಾರವಾಡದಲ್ಲಿ 21% ಮಹಿಳಾ ಉದ್ಯೋಗಿಗಳ ಸಂಖ್ಯೆಯು ಶಕ್ತಿ ಯೋಜನೆಯಿಂದ ಹೆಚ್ಚಳವಾಗಿದೆಯೆಂದು ತಿಳಿಸಿದೆ. ಮತ್ತೊಂದು ವರದಿಯು ಶೇ.19 ಸ್ತ್ರೀಯರು ಮನೆಯಿಂದ ಹೊರಹೋಗಿ ಕೆಲಸ ಮಾಡಲು ಆರಂಭಿಸಿದ್ದಾರೆ ಎಂದು ತಿಳಿಸಿದೆ. ಇದರಿಂದ ರಾಜ್ಯದ ತಲಾ ಆದಾಯವು ಹೆಚ್ಚಳವಾಗಲು ಕಾರಣವಾಗಿದೆ ಎಂದು ಬೊಟ್ಟು ಮಾಡಿದರು.

ಶೂನ್ಯ ಅಭಿವೃದ್ಧಿ ಶೂರರಾದ ಬಿ.ಜೆ.ಪಿ ಯವರು ಅವರನ್ನು ಬೆಂಬಲಿಸುತ್ತಿರುವವರು ಟ್ವಿಟ್ ಮಾಡುವುದು, ಖಾಸಗಿ ಸಮ್ಮೇಳನಗಳಲ್ಲಿ ಮಾತನಾಡುವುದು ಬಿಟ್ಟರೆ ಇವರ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಪ್ರಶ್ನಿಸಿದ ರಾಮಲಿಂಗಾ ರೆಡ್ಡಿ, ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಂದು ಈಗ ಮುಚ್ಚಿಬಿಡಿ ಎಂದು ತಾನೆ ಅವರು ಹೇಳಬೇಕು. ಸಾರಿಗೆ ಸಂಸ್ಥೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಕುಟುಂಬದವರನ್ನು ಬೀದಿ ಪಾಲು ಮಾಡುವ ಮನಸ್ಥಿತಿ ಸರಿಯಲ್ಲ ಎಂದು ಪ್ರತಿಪಾದಿಸಿದರು.

ಕಳೆದ 2 ವರ್ಷ 5 ತಿಂಗಳಿನಲ್ಲಿ ನಮ್ಮ ಸರ್ಕಾರ ಶೂನ್ಯ ನೇಮಕಾತಿಯಿಂದ- 10000 ನೇಮಕಾತಿ, ಶೂನ್ಯ ಬಸ್ಸುಗಳ ಸೇರ್ಪಡೆಯಿಂದ – 5800 ಹೊಸ ಬಸ್ಸುಗಳ ಸೇರ್ಪಡೆ, ಹೊಸ ಘಟಕ/ ಬಸ್ ನಿಲ್ದಾಣಗಳ ನಿರ್ಮಾಣ, ಹತ್ತು ಹಲವು ಕಾರ್ಮಿಕ ಕಲ್ಯಾಣ ಯೋಜನೆಗಳು -ರೂ.1 ಕೋಟಿ ಅಪಘಾತ ವಿಮೆ, ನಗದು ರಹಿತ ವೈದ್ಯಕೀಯ ಸೌಲಭ್ಯ. ಜಾರಿ ಮಾಡಿದೆ. ದೇಶದ ಸಾರಿಗೆ ವ್ಯವಸ್ಥೆಯನ್ನು ಅವಲೋಕಿಸಿದರೆ, ನಮ್ಮ ರಾಜ್ಯವೇ ಸಾರಿಗೆ ಸೇವೆಯಲ್ಲಿ ಅತ್ಯುತ್ತಮವಾಗಿದೆ. ದೇಶದ ಸರಾಸರಿಯೇ 1000 ಜನರಿಗೆ 1.2 ಬಸ್ಸುಗಳಿವೆ ಎಂದವರು ವಿವರಿಸಿದರು.

ಬಿ.ಜೆ.ಪಿ ಆಡಳಿತ ವಿರುವ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಗುಜರಾತ್, ರಾಜಸ್ಥಾನ, ಒಡಿಶಾಗಳಲ್ಲಿ ಪ್ರತಿ ಸಾವಿರ ಜನರಿಗೆ ಲಭ್ಯವಿರುವ ಬಸ್ಸುಗಳ ಸಂಖ್ಯೆ ಕಡಿಮೆಯಿದೆ. ಲೋಕಸಭಾ ಸದಸ್ಯರಾದ ತೇಜಸ್ಸಿ ಸೂರ್ಯ ಮತ್ತು ಮೋಹನ್ ದಾಸ್ ಪ್ರೈ, ರವರುಗಳೇ, ಈ ಮೇಲ್ಕಂಡ ರಾಜ್ಯಗಳಲ್ಲಿ ಸಾರಿಗೆ ವ್ಯವಸ್ಥೆ ಬಲಪಡಿಸಲು ದೇಶದ ಪ್ರಧಾನ ಮಂತ್ರಿಗಳಿಗೆ ಸಲಹೆ ನೀಡಿ, ಸುಧಾರಣೆ ತನ್ನಿ ಎಂದು ತೇಜಸ್ವಿ ಸೂರ್ಯ ಅವರಿಗೆ ಸಲಹೆ ಮಾಡಿದರು.

ಎಲ್ಲರ ಮನೆಗಿಂತಲೂ ತಮ್ಮ ಮನೆ ಚೆನ್ನಾಗಿದೆ ಅದನ್ನು ಮನಗಾಣುವ ಬದಲು ದೂಷಿಸುವ ಪರಿಪಾಠ ಮಾರಕವಾದದ್ದು ಎಂದ ರಾಮಲಿಂಗಾ ರೆಡ್ಡಿ, No More Buses ಅಲ್ಲ ಬದಲಾಗಿ More and More Buses ಎಂದು ಹೇಳಬೇಕು ಎಂದರು.

Related posts