ಮೈಸೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಮೈಸೂರಿನಲ್ಲಿ ದಾರುಣ ಘಟನೆ ಸಂಭವಿಸಿದೆ. ಕಾಲುವೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರುಪಾಲಾಗಿ ಮೃತಪಟ್ಟಿದ್ದಾರೆ.
ಸಾಲಿಗ್ರಾಮ ಪಟ್ಟಣದ ಚಾಮರಾಜ ಎಡದಂಡೆ ಕಾಲುವೆಯಲ್ಲಿ ಈ ಘಟನೆ ಸಂಭವಿಸಿದ್ದು, ಮೃತರು ಕೆ.ಆರ್. ಪೇಟೆಯ ನವೋದಯ ಶಾಲೆಯ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.
ಭಾನುವಾರ ಮಧ್ಯಾಹ್ನ ಸ್ನಾನಕ್ಕಾಗಿ ಕಾಲುವೆಗೆ ತೆರಳಿದ ಮಕ್ಕಳು ಸಂಜೆಗೂ ಮನೆಗೆ ಮರಳದ ಕಾರಣ ಕುಟುಂಬದವರು ಹುಡುಕಾಟ ನಡೆಸಿದರು. ಹುಡುಕಾಟದ ವೇಳೆ ಕಾಲುವೆದಂಡೆಯಲ್ಲಿ ಮಕ್ಕಳ ಬಟ್ಟೆ ಹಾಗೂ ಚಪ್ಪಲಿಗಳು ಪತ್ತೆಯಾಗಿದ್ದವು.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.