ಭಾರತವನ್ನು ದೂರ ಮಾಡುವ ಪ್ರಶ್ನೆಯೇ ಇಲ್ಲ; ಅಮೆರಿಕಾ ಸ್ಪಷ್ಟನೆ

ವಾಷಿಂಗ್ಟನ್: ಪಾಕಿಸ್ತಾನದೊಂದಿಗೆ ಬಾಂಧವ್ಯ ವಿಸ್ತರಿಸುವ ಪ್ರಯತ್ನ ಅಮೆರಿಕದಿಂದ ನಡೆಯುತ್ತಿದ್ದರೂ, ಅದರ ಪರಿಣಾಮವಾಗಿ ಭಾರತವನ್ನು ದೂರ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಸ್ಪಷ್ಟಪಡಿಸಿದ್ದಾರೆ.

ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮಲೇಷ್ಯಾದ ಕ್ವಾಲಾಲಂಪುರಕ್ಕೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಾಕಿಸ್ತಾನ ಜೊತೆಗಿನ ಪಾಲುದಾರಿಕೆಯನ್ನು ಮತ್ತಷ್ಟು ಗಾಢಗೊಳಿಸಲು ಅಮೆರಿಕ ಬಯಸುತ್ತದೆ. ಆದರೆ, ಭಾರತದೊಂದಿಗೆ ಇರುವ ಐತಿಹಾಸಿಕ ಮತ್ತು ಮಹತ್ವದ ಬಾಂಧವ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಾವು ಮುಂದುವರೆಯುತ್ತೇವೆ” ಎಂದು ಹೇಳಿದರು.

ಭಾರತದ ಆತಂಕ ಸಹಜವಾಗಿದೆಯಾದರೂ, ಅಮೆರಿಕ ಹಲವು ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧ ಬೆಳೆಸಬೇಕಾಗುತ್ತದೆ ಎಂಬುದನ್ನು ಭಾರತ ಅರ್ಥಮಾಡಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ರುಬಿಯೋ ಹೇಳಿದರು.

“ಪಾಕಿಸ್ತಾನದೊಂದಿಗೆ ರಕ್ಷಣಾ ಸಹಕಾರ ವೃದ್ಧಿಸಲು ಅವಕಾಶಗಳಿವೆ. ರಾಜತಾಂತ್ರಿಕ ವಿಚಾರಗಳಲ್ಲಿ ಭಾರತೀಯರು ಪ್ರಬುದ್ಧರು ಎಂಬುದು ನನ್ನ ನಂಬಿಕೆ” ಎಂದು ಅವರು ಅಭಿಪ್ರಾಯಪಟ್ಟರು.

ಭಾರತವೂ ಕೂಡ ಅಮೆರಿಕ ಸಂಬಂಧ ಹೊಂದಿರದ ಕೆಲವು ರಾಷ್ಟ್ರಗಳೊಂದಿಗೆ ಬಾಂಧವ್ಯ ಕಾಪಾಡಿಕೊಂಡಿದೆ. “ಇವು ತರ್ಕಬದ್ಧ ಹಾಗೂ ಪ್ರಬುದ್ಧ ವಿದೇಶಾಂಗ ನೀತಿಯ ಅಂಗಗಳು” ಎಂದೂ ರುಬಿಯೋ ಹೇಳಿದರು.

“ಭಾರತದೊಂದಿಗೆ ನಮ್ಮ ದೀರ್ಘಕಾಲದ ಪಾಲುದಾರಿಕೆಯನ್ನು ಅಮೆರಿಕ ಗೌರವಿಸುತ್ತದೆ. ಎರಡೂ ರಾಷ್ಟ್ರಗಳು ಆಧುನಿಕ ರಾಜತಾಂತ್ರಿಕತೆಯ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳುತ್ತವೆ. ಪಾಕಿಸ್ತಾನದೊಂದಿಗೆ ನಮ್ಮ ಯಾವುದೇ ನಡವಳಿಕೆ ಭಾರತದ ಸ್ನೇಹಕ್ಕೆ ಧಕ್ಕೆ ತರದು. ಆ ಸಂಬಂಧ ಆಳವಾದ, ಐತಿಹಾಸಿಕ ಮತ್ತು ಪ್ರಮುಖವಾಗಿದೆ” ಎಂದು ರುಬಿಯೋ ಸ್ಪಷ್ಟಪಡಿಸಿದರು.

Related posts