ತುಂಗಭದ್ರಾ ರೈತರ ಎರಡನೇ ಬೆಳೆಗೆ ನೀರು: ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಹೋರಾಟಕ್ಕೆ ಬಿಜೆಪಿ ನಿರ್ಧಾರ

ಬೆಂಗಳೂರು: ತುಂಗಭದ್ರಾ ರೈತರ ಎರಡನೇ ಬೆಳೆಗೆ ನೀರು ಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಹೋರಾಟಕ್ಕೆ ಬಿಜೆಪಿ ನಿರ್ಧಾರಿಸಿದೆ.

ತುಂಗಭದ್ರಾ ಜಲಾನಯನ ಪ್ರದೇಶದ ನಾಲ್ಕು ಜಿಲ್ಲೆಗಳ ರೈತರಿಗೆ ಎರಡನೇ ಬೆಳೆಗೆ ನೀರು ಒದಗಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಚರ್ಚಿಸಲು ಶನಿವಾರ ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ನಡೆದ ಪ್ರಮುಖರ ಸಭೆ ಗಮನಸೆಳೆಯಿತು. ಅನ್ನದಾತರ ನೆರವಿಗೆ ಎಂದೂ ಬಾರದ ಈ ರಾಜ್ಯ ಸರ್ಕಾರ, ಅತಿವೃಷ್ಟಿ, ಅನಾವೃಷ್ಟಿ, ಬೆಳೆನಾಶ, ಸಾಲಬಾಧೆ, ಸೇರಿದಂತೆ ರೈತರ ಬಗ್ಗೆ ಕನಿಷ್ಠ ಕಾಳಜಿಯನ್ನೂ ತೋರಿಸಲಿಲ್ಲ. ಈಗ ತುಂಗಭದ್ರಾ ಪ್ರದೇಶದ ರೈತರ ಎರಡನೇ ಬೆಳೆಯ ಈ ಗಂಭೀರ ಸಮಸ್ಯೆಗೂ ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ, ರೈತರ ಹಿತರಕ್ಷಣೆಗಾಗಿ ಹಾಗೂ ಅವರ ಧ್ವನಿಯಾಗಿ ಹೋರಾಟ ರೂಪಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಹೋರಾಟದ ಮುಂದಿನ ರೂಪರೇಷೆಗಳ ಕುರಿತು ಚರ್ಚಿಸಲಾಯಿತು.

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಸರ್ಕಾರವು ಸಮಯೋಚಿತವಾಗಿ ಕೈಗೊಳ್ಳದ ಕಾರಣ, ಇಂದು ರೈತರು ಎರಡನೇ ಬೆಳೆಗೆ ನೀರಿನ ಅಭಾವದಿಂದ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. ರೈತರ ಎರಡನೇ ಬೆಳೆಗೆ ನೀರು ಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಮಾಜಿ ಸಚಿವರಾದ ಗೋವಿಂದ್ ಕಾರಜೋಳ, ಶ್ರೀರಾಮುಲು, ವಿಶಾಸಕರಾದ ದೊಡ್ಡನಗೌಡ ಹೆಚ್. ಪಾಟೀಲ್, ಮಾನಪ್ಪ ಡಿ ವಜ್ಜಲ್, ಡಾ.ಶಿವರಾಜ್ ಪಾಟೀಲ್, ಮಾಜಿ ಶಾಸಕ ಶಿವನಗೌಡ ನಾಯಕ್, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Related posts