ಹಗಲು ದರೋಡೆ ಪ್ರಕರಣ ಬೇಧಿಸಲು ಪ್ರಯತ್ನ; ಹೆಜ್ಜೆಗುರುತು ಬೆನ್ನತ್ತಿದ ಬೆಂಗಳೂರು ಪೊಲೀಸ್

ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಅತಿ ದೊಡ್ಡ ದರೋಡೆ ರಾಜ್ಯ ಪೊಲೀಸ್ ವ್ಯವಸ್ಥೆಗೆ ಸವಾಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿದ ದುಷ್ಕರ್ಮಿಗಳ ಗುಂಪೊಂದು ಜಯನಗರದಲ್ಲಿ 7 ಕೋಟಿ ರೂಪಾಯಿ ದೋಚಿ ಪರಾರಿಯಾದ ಘಟನೆ ಬುಧವಾರ ನಡೆದಿದೆ.

ಜೆ.ಪಿ.ನಗರದ ಬ್ಯಾಂಕ್‌ ಶಾಖೆಯಿಂದ ಎಟಿಎಂಗಳಿಗೆ ನಗದು ಸಾಗಿಸುತ್ತಿದ್ದ ವ್ಯಾನನ್ನು ಜಯನಗರ ಅಶೋಕ ಪಿಲ್ಲರ್ ಬಳಿ ತಡೆದು ದಾಖಲೆ ಪರಿಶೀಲನೆ ನೆಪದಲ್ಲಿ ಜಾಲಾಡಿದ್ದಾರೆ ಎನ್ನಲಾಗಿದೆ. ಭಾರತ ಸರ್ಕಾರದ ಸ್ಟಿಕ್ಕರ್ ಅಂಟಿಸಿದ್ದ ಕಾರಿನಲ್ಲಿ ಬಂದಿದ್ದ ಆರೋಪಿಗಳು ಸಿಬ್ಬಂದಿಯನ್ನು ಬೆದರಿಸಿ, ನಗದು ತುಂಬಿದ ಚೀಲಗಳೊಂದಿಗೆ ತಮ್ಮ ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ನಂತರ ಡೈರಿ ಸರ್ಕಲ್ ಬಳಿ ಸಿಬ್ಬಂದಿಯನ್ನು ಇಳಿಸಿ, ಸುಮಾರು 7 ಕೋಟಿ ರೂ.ಗಳಷ್ಟು ಹಣದೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಕ್ಷಣ ಕ್ರಮ ಕೈಗೊಳ್ಳುವಂತೆ ಡಿಜಿ-ಐಜಿಪಿ ಸಲೀಂ ಅವರಿಗೆ ಸೂಚಿಸಿದ್ದಾರೆ.

ಘಟನೆಯ ನಂತರಸರಣಿ ಸಭೆಗಳನ್ನು ನಡೆಸಿ, ಪತ್ತೆ ಕಾರ್ಯಾಚರಣೆಗೆ ವೇಗ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪೊಲೀಸರ ತಂಡಗಳನ್ನು ರಚಿಸಿದ್ದಾರೆ. ದರೋಡೆ ನಡೆದ ಸ್ಥಳ, ಆರೋಪಿಗಳು ಪರಾರಿಯಾಗಿರುವ ಮಾರ್ಗ ಹಾಗೂ ಕೃತ್ಯ ನಡೆಸಿದವರ ಮಾಹಿತಿ ಕಲೆಹಾಕಲು 50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಪ್ರಕರಣವನ್ನು ಆದಷ್ಟು ಬೇಗ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಇಬ್ಬರು ಡಿಸಿಪಿಗಳು ಹಾಗೂ ಜಂಟಿ ಆಯುಕ್ತರು ವಿಶೇಷ ತಂಡವಾಗಿ ಕೆಲಸ ಮಾಡುತ್ತಿದ್ದಾರೆ,” ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ

Related posts