ನವದೆಹಲಿ: ಈ ವರ್ಷದ ಜನವರಿ 17ರಂದು ಬಿಡುಗಡೆಗೊಂಡ ನಂತರದಿಂದ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ 1.4 ಕೋಟಿಗೂ ಹೆಚ್ಚು ಡೌನ್ಲೋಡ್ಗಳನ್ನು ದಾಖಲಿಸಿದ್ದು, 42 ಲಕ್ಷಕ್ಕೂ ಹೆಚ್ಚು ಕದ್ದ ಅಥವಾ ಕಳೆದುಹೋದ ಮೊಬೈಲ್ ಸಾಧನಗಳನ್ನು ನಿರ್ಬಂಧಿಸಲು ಯಶಸ್ವಿಯಾಗಿದೆ ಎಂದು ಮಂಗಳವಾರ ಹೊರಬಿದ್ದ ಅಧಿಕೃತ ದತ್ತಾಂಶಗಳು ತಿಳಿಸಿವೆ.
ಇಲ್ಲಿಯವರೆಗೆ 26 ಲಕ್ಷ ಕಳೆದುಹೋದ/ಕಳುವಾದ ಫೋನ್ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳಲ್ಲಿ 7.23 ಲಕ್ಷ ಸಾಧನಗಳನ್ನು ಸಂಚಾರ್ ಸಾಥಿಯ ಮೂಲಕ ಹಿಂತಿರುಗಿಸಲಾಗಿದೆ. ಸಂಪೂರ್ಣವಾಗಿ ಸ್ವಯಂಪ್ರೇರಿತ ಮತ್ತು ಬಳಕೆದಾರರ ಒಪ್ಪಿಗೆಯಿಂದ ಮಾತ್ರ ಕಾರ್ಯನಿರ್ವಹಿಸುವ ಈ ವೇದಿಕೆ ಗೌಪ್ಯತೆ-ಪ್ರಥಮ ನೀತಿಯನ್ನು ಅನುಸರಿಸುತ್ತದೆ.
ಅಪ್ಲಿಕೇಶನ್ ಸೇವೆಗಳನ್ನು ಬಳಕೆದಾರರು ನೋಂದಾಯಿಸಿದ ಬಳಿಕ ಮಾತ್ರ ಸಕ್ರಿಯಗೊಳ್ಳುತ್ತದೆ. ಯಾವುದೇ ಸಮಯದಲ್ಲಿಯೂ ಅದನ್ನು ಬಳಕೆದಾರರು ಸಕ್ರಿಯಗೊಳಿಸಬಹುದು, ನಿಷ್ಕ್ರಿಯಗೊಳಿಸಬಹುದು ಅಥವಾ ಅಳಿಸಬಹುದು. ಗೌಪ್ಯತೆ ಕದಲಾಗದಂತೆ ಭಾರತದೆಲ್ಲೆಡೆ ಸೈಬರ್ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಅಪ್ಲಿಕೇಶನ್ ವಿನ್ಯಾಸಗೊಳಿಸಲಾಗಿದೆ.
ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆದಾರರ ಸುರಕ್ಷತೆ ರಾಷ್ಟ್ರದ ಪ್ರಮುಖ ಕಾಳಜಿಯಾಗಿದೆ.
CERT-In ದತ್ತಾಂಶ ಪ್ರಕಾರ, 2023ರಲ್ಲಿ 15.92 ಲಕ್ಷ ಇದ್ದ ಸೈಬರ್ ಘಟನೆಗಳು 2024ರಲ್ಲಿ 20.41 ಲಕ್ಷಕ್ಕೆ ಏರಿಕೆಯಾಗಿದೆ. 2024ರಲ್ಲಿ ಮಾತ್ರ 1,23,672 ಡಿಜಿಟಲ್ ಬಂಧನ ಮತ್ತು ಸಂಬಂಧಿತ ಸೈಬರ್ ಅಪರಾಧಗಳು ವರದಿಯಾಗಿದ್ದು, 2025ರ ಫೆಬ್ರವರಿವರೆಗೂ 17,718 ಪ್ರಕರಣಗಳು ದಾಖಲಾಗಿವೆ.
ಈ ಹೆಚ್ಚುತ್ತಿರುವ ಅಪಾಯಗಳನ್ನು ಎದುರಿಸಲು, ದೂರಸಂಪರ್ಕ ಇಲಾಖೆ (DoT) ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ನಾಗರಿಕ-ಕೇಂದ್ರಿತ ಭದ್ರತಾ ಸಾಧನವಾಗಿ ಪರಿಚಯಿಸಿದೆ. ಗುರುತಿನ ಕಳ್ಳತನ, ನಕಲಿ KYC, ಸಾಧನ ಕಳ್ಳತನ, ಬ್ಯಾಂಕಿಂಗ್ ವಂಚನೆ ಸೇರಿದಂತೆ ವಿವಿಧ ಸೈಬರ್ ಅಪಾಯಗಳಿಂದ ತಕ್ಷಣದ ರಕ್ಷಣೆಯನ್ನು ಬಳಕೆದಾರರ ಸ್ಮಾರ್ಟ್ಫೋನ್ಗಳಲ್ಲೇ ಒದಗಿಸುತ್ತದೆ.
ಅಪ್ಲಿಕೇಶನ್ ಲಭ್ಯತೆಯನ್ನು ಹೆಚ್ಚಿಸಲು, ದೇಶದಲ್ಲಿನ ಎಲ್ಲಾ ಮೊಬೈಲ್ ತಯಾರಕರು ಹಾಗೂ ಆಮದುದಾರರಿಗೆ ಸಾಧನಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಸುಲಭವಾಗಿ ಲಭ್ಯಗೊಳಿಸುವಂತೆ DoT ನಿರ್ದೇಶನ ನೀಡಿದೆ.
ಬಳಸಲು ಸುಲಭವಾದ ಪರಿಕರಗಳು, ನೈಜ-ಸಮಯದ ಭದ್ರತಾ ವೈಶಿಷ್ಟ್ಯಗಳು ಮತ್ತು ವಂಚನೆ ವರದಿ ಸಾಮರ್ಥ್ಯಗಳೊಂದಿಗೆ ಸಂಚಾರ್ ಸಾಥಿ, ಸೈಬರ್ ಅಪರಾಧಗಳಿಗೆ ಭಾರತದ ಸಮಯೋಚಿತ ಪ್ರತಿಕ್ರಿಯೆಯಾಗಿ ಹೊರಹೊಮ್ಮಿದೆ.
ಅಪ್ಲಿಕೇಶನ್ ಹಿಂದಿ ಮತ್ತು ಇನ್ನೂ 21 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದ್ದು, ದೇಶಾದ್ಯಂತ ಬಳಸುವಂತೆ ಮಾಡಲಾಗಿದೆ. ಸಂಚಾರ್ ಸಾಥಿ ಬಳಕೆದಾರರ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಅಗತ್ಯವಾದ ಕನಿಷ್ಠ ಮಾಹಿತಿಯನ್ನು ಮಾತ್ರ ಸಂಗ್ರಹಿಸಲಾಗುತ್ತದೆ; ಯಾವುದೇ ವಾಣಿಜ್ಯ ಪ್ರೊಫೈಲಿಂಗ್ ಇಲ್ಲ, ಮೂರನೇ ವ್ಯಕ್ತಿಗಳೊಂದಿಗೆ ಡೇಟಾ ಹಂಚಿಕೊಳ್ಳುವುದಿಲ್ಲ. ಕಾನೂನುಬದ್ಧ ಅವಶ್ಯಕತೆಯಿದ್ದಲ್ಲಿ ಮಾತ್ರ, ಅಧಿಕೃತವಾಗಿ ಕಾನೂನು ಜಾರಿ ಸಂಸ್ಥೆಗಳಿಗೆ ಸೀಮಿತ ಹಂಚಿಕೆ ಮಾಡಲಾಗುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
