ದಾವಣಗೆರೆ: ರಾತ್ರಿ ವೇಳೆ ಜಮೀನಿಗೆ ತೆರಳಿ ನೀರಾಯಿಸಲು ಕಾಡುಪ್ರಾಣಿಗಳ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹಗಲು ವೇಳೆಯಲ್ಲೇ ವಿದ್ಯುತ್ ಪೂರೈಸಬೇಕೆಂದು ರೈತರು ವಿದ್ಯುತ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ಬೆಸ್ಕಾಂ ವಿಭಾಗ ಕಚೇರಿಯಲ್ಲಿ ತಮಲೇಹಳ್ಳಿ, ಗೌಡಗೊಂಡನಹಳ್ಳಿ, ಕೆಳಗೋಟೆ, ಚಿಕ್ಕಮ್ಮನಹಟ್ಟಿ, ಹಿರೇಬನ್ನಿಹಟ್ಟಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಸೇರಿ ಎಇಇ ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.
ಯುವ ಮುಖಂಡ ತಮಲೇಹಳ್ಳಿ ಶ್ರೀನಿವಾಸ್ ಮಾತನಾಡಿ, “ಕೊಂಡಕುರಿ ಅಂಚಿನಲ್ಲಿರುವ ಹಲವು ಗ್ರಾಮಗಳ ರೈತರು ರಾತ್ರಿ ವೇಳೆ ಜಮೀನಿಗೆ ತೆರಳುವುದೇ ಭಯ. ಕಾಡುಪ್ರಾಣಿಗಳ ಉಪಟಳ ಹೆಚ್ಚಿರುವುದರಿಂದ ರಾತ್ರಿ ಬದಲಿಗೆ ಹಗಲಿನಲ್ಲಿ 5 ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು” ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಎಇಇ ಮಲ್ಲಿಕಾರ್ಜುನ್, “ಸೊಕ್ಕೆ–ಪಲ್ಲಾಗಟ್ಟೆ ಮಾರ್ಗದ ವಿದ್ಯುತ್ ಸಂಪರ್ಕವನ್ನು ಬೇರ್ಪಡಿಸಿ, ತುರವನೂರು ಮಾರ್ಗದಿಂದ ಲಿಂಕ್ ಲೈನ್ ಮೂಲಕ ಬೆಳಗಿನ ವೇಳೆಯಲ್ಲಿ ವಿದ್ಯುತ್ ಪೂರೈಸಲು ಕ್ರಮಜರುಗಿಸಲಾಗುತ್ತಿದೆ. ಬುಧವಾರದೊಳಗಾಗಿ ಪರಿಷ್ಕೃತ ವ್ಯವಸ್ಥೆ ಜಾರಿಗೆ ಬರಲಿದೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತರಾದ ಹನುಮಂತಪ್ಪ, ಕೆಂಗರಾಜ್, ವಿಜಯ್ ಕುಮಾರ್, ಬಸವರಾಜ್, ಸಿದ್ದಣ್ಣ ಸೇರಿದಂತೆ ಹಲವರು ಹಾಜರಿದ್ದರು.
