ಹಿಂಸೆ ತಡೆಯಲು ‘ದ್ವೇಷ ಪ್ರತಿಬಂಧಕ ವಿಧೇಯಕ’ ಪ್ರಬಲ ಅಸ್ತ್ರ; ಪದ್ಮರಾಜ್ ಆರ್. ಪೂಜಾರಿ

ಮಂಗಳೂರು: ರಾಜ್ಯ ಸರ್ಕಾರ ಮಂಡಿಸಿರುವ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ–2025’ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿರುವ ನಡುವೆ, ಈ ಮಸೂದೆ ಸಾಮಾಜಿಕ ಸಾಮರಸ್ಯ ಕಾಪಾಡಲು ಸಹಕಾರಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.

‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ’ ಜಾರಿಗೆ ತರುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದ ಮೊದಲ ವ್ಯಕ್ತಿ ಪದ್ಮರಾಜ್ ಆರ್. ಪೂಜಾರಿ. ಇದೀಗ ಈ ವಿದೇಯಕ ಜಾರಿಯಾಗುತ್ತಿರುವ ಬಗ್ಗೆ ಅವರು ಸಂತಸ ಹಂಚಿಕೊಂಡಿದ್ದಾರೆ. ವಿಧೇಯಕವು ಯಾರ ವಿರುದ್ದವೂ ಸೇಡು ತೀರಿಸಲು ಅಲ್ಲ, ಸಾಮಾಜಿಕ ಸ್ವಾಸ್ತ್ಯ ಕಾಪಾಡುವುದಕ್ಕಷ್ಟೇ’ ಎಂದವರು ಹೇಳಿದ್ದಾರೆ.

ವಿಧೇಯಕವನ್ನು ಪ್ರತಿಪಕ್ಷಗಳು ಜನವಿರೋಧಿ ಎಂದು ಟೀಕಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇದೊಂದು ಜನಸ್ನೇಹಿ ಮತ್ತು ಕಾಲದ ಅಗತ್ಯಕ್ಕೆ ತಕ್ಕ ಕ್ರಮವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ದ್ವೇಷ ಭಾಷಣ ನಿಯಂತ್ರಣಕ್ಕೆ ಕರ್ನಾಟಕಕ್ಕೆ ಸೂಕ್ತ ಕಾನೂನು ಅಗತ್ಯವಿದೆ ಎಂಬುದನ್ನು ತಾವು ಹಲವು ತಿಂಗಳ ಹಿಂದೆಯೇ ಪ್ರತಿಪಾದಿಸಿದ್ದಾಗಿ ಅವರು ನೆನಪಿಸಿದರು.

ಕರಾವಳಿ ಜಿಲ್ಲೆಗಳಲ್ಲಿ ನಡೆದ ಕೊಲೆಗಳು ಹಾಗೂ ಹಿಂಸಾಚಾರಗಳ ಹಿಂದೆ ದ್ವೇಷ ಮತ್ತು ಪ್ರಚೋದನೆ ಪ್ರಮುಖ ಕಾರಣಗಳಾಗಿದ್ದು, ಇವುಗಳಿಗೆ ಕಾನೂನಿನ ಮೂಲಕ ಅಂಕುಶ ಅಗತ್ಯ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆ ಆಗ್ರಹ ಇದೀಗ ವಿಧೇಯಕದ ರೂಪ ಪಡೆದುಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಅವರು ಹೇಳಿದರು.

ಮಂಗಳೂರಿನಲ್ಲಿ ಮಾತನಾಡಿದ ಪದ್ಮರಾಜ್ ಆರ್. ಪೂಜಾರಿ, ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಧಾರ್ಮಿಕ ಮತ್ತು ರಾಜಕೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಸಂಘರ್ಷ ಸೃಷ್ಟಿಸುವ ಭಾಷಣಗಳು ಹೆಚ್ಚಾಗುತ್ತಿವೆ. ಯುವಕರನ್ನು ಪ್ರಚೋದಿಸುವಂತಹ ಮಾತುಗಳು ಮರುಕಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡಲು ಮತ್ತು ದ್ವೇಷ ಭಾಷಣದಿಂದ ಉಂಟಾಗುವ ಸಂಘರ್ಷಗಳನ್ನು ತಡೆಗಟ್ಟಲು ಈ ವಿಧೇಯಕ ಪರಿಣಾಮಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ವ್ಯಕ್ತಿ, ಸಮೂಹ ಅಥವಾ ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ದ್ವೇಷ ಉಂಟುಮಾಡುವ ಭಾಷಣ ಮತ್ತು ಅಪರಾಧಗಳನ್ನು ತಡೆಗಟ್ಟಲು, ಅಂತಹ ಕೃತ್ಯಗಳಿಗೆ ದಂಡನೆಯನ್ನು ನಿಗದಿಪಡಿಸಲು ಹಾಗೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ಈ ವಿಧೇಯಕ ಸಹಕಾರಿಯಾಗಲಿದೆ ಎಂದರು.

ವಕೀಲರೂ ಆಗಿರುವ ಪದ್ಮರಾಜ್, ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಧಾರ್ಮಿಕ ಮತ್ತು ರಾಜಕೀಯ ಕಾರಣಗಳಿಂದ ದ್ವೇಷ ಭಾಷಣದ ಪರಿಣಾಮ ಅನೇಕ ಬಡ ಕುಟುಂಬಗಳ ಯುವಕರು ಬಲಿಯಾಗುತ್ತಿರುವುದನ್ನು ಉಲ್ಲೇಖಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಹಾಸ್ ಶೆಟ್ಟಿ ಹಾಗೂ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಗಳ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೇಮಿಸಿದ್ದ ಸತ್ಯಶೋಧನಾ ಸಮಿತಿಯೂ ದ್ವೇಷ ಭಾಷಣ ವಿರುದ್ಧ ಕಠಿಣ ಕಾನೂನು ಅಗತ್ಯತೆ ಬಗ್ಗೆ ಗಮನಸೆಳೆದಿತ್ತು ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಈ ವಿಧೇಯಕಕ್ಕೆ ಅಂಗೀಕಾರ ನೀಡಿರುವುದು ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ವ ಜನಾಂಗಗಳ ಶಾಂತಿಯ ತೋಟವಾಗಲು ಇದು ನೆರವಾಗಲಿದೆ ಎಂದು ಪದ್ಮರಾಜ್ ಆರ್. ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

Related posts