ಬೀದರ್: ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷ ಡಾ. ಭೀಮಣ್ಣ ಖಂಡ್ರೆ (102) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಬೀದರ್ನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ವಯೋ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಮಲ್ಸಿ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಸೋಮವಾರ ಮನೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿತ್ತು. ಶುಕ್ರವಾರ ರಾತ್ರಿ ಆರೋಗ್ಯ ಮತ್ತಷ್ಟು ಕ್ಷೀಣಿಸಿ ಕೊನೆಯುಸಿರೆಳೆದಿದ್ದಾರೆ.
ಭಾಲ್ಕಿಯ ಗಾಂಧಿ ಗಂಜ್ನಲ್ಲಿರುವ ಸ್ವಗೃಹದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
1949–50ರಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ ಭೀಮಣ್ಣ ಖಂಡ್ರೆ, 1953ರಲ್ಲಿ ಭಾಲ್ಕಿ ಪುರಸಭೆಯ ಮೊದಲ ಚುನಾಯಿತ ಅಧ್ಯಕ್ಷರಾಗಿ ಜನಸೇವೆಗೆ ಪ್ರವೇಶಿಸಿದರು. ಅವರು 1962, 1967, 1978 ಮತ್ತು 1983ರಲ್ಲಿ ಭಾಲ್ಕಿ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಇದೇ ವೇಳೆ 1988 ರಿಂದ 1994ರವರೆಗೆ ಎರಡು ಅವಧಿಗಳಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದರು. ಶಾಸನಸಭೆಯ ವಿವಿಧ ಸಮಿತಿಗಳ ಸದಸ್ಯ ಹಾಗೂ ಅಧ್ಯಕ್ಷರಾಗಿ, ಪಾರ್ಲಿಮೆಂಟರಿ ವ್ಯವಹಾರಗಳ ಅಧ್ಯಯನ ಸಂಸ್ಥೆಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಎಂ. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1992–94) ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ ಅವರು, ಶಿಸ್ತುಬದ್ಧ ಆಡಳಿತ, ಪಾರದರ್ಶಕತೆ ಮತ್ತು ಜನಪರ ನಿಲುವಿಗೆ ಹೆಸರುವಾಸಿಯಾಗಿದ್ದರು.
1980ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಭೆಯ ಸದಸ್ಯ, ಕಾರ್ಯದರ್ಶಿ ಹಾಗೂ ರೈತ ವಿಭಾಗದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ ಅವರು, ರೈತಪರ ಹೋರಾಟಗಳಿಗೆ ಸದಾ ಧ್ವನಿ ಎತ್ತಿದರು. ವೀರಶೈವ ಲಿಂಗಾಯತ ಸಮುದಾಯದ ಸಂಘಟನೆ, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಗೆ ಮಹತ್ವದ ಕೊಡುಗೆ ನೀಡಿದ್ದರು.
ರಾಜ್ಯ ಏಕೀಕರಣದ ಸುವರ್ಣ ಮಹೋತ್ಸವದ ಅಂಗವಾಗಿ 2006ರ ನವೆಂಬರ್ 1ರಂದು ಕರ್ನಾಟಕ ಸರ್ಕಾರವು ಅವರಿಗೆ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿತ್ತು.
ಹಿರಿಯ ರಾಜಕಾರಣಿ, ಸಮಾಜಸೇವಕ ಮತ್ತು ಸರಳ ಜೀವನಕ್ಕೆ ಮಾದರಿಯಾಗಿದ್ದ ಭೀಮಣ್ಣ ಖಂಡ್ರೆ ಅವರ ನಿಧನದಿಂದ ಉತ್ತರ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ದುಃಖ ಮನೆಮಾಡಿದೆ.
