ಗುವಾಹಟಿ: ದೇಶದ ಜನರು ಕಾಂಗ್ರೆಸ್ ಪಕ್ಷ ಹಾಗೂ ಅದರ ರಾಜಕೀಯವನ್ನು ತಿರಸ್ಕರಿಸಿದ್ದು, ವಿರೋಧ ಪಕ್ಷವು ಹಲವು ರಾಜ್ಯಗಳಲ್ಲಿ ಆಘಾತಕಾರಿ ಸೋಲುಗಳನ್ನು ಅನುಭವಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಸ್ಸಾಂನ ಕಾಜಿರಂಗದಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಇತ್ತೀಚಿನ ಪುರಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಸೋತಿರುವುದನ್ನು ಉಲ್ಲೇಖಿಸಿದರು. ಬಿಜೆಪಿಯ ಆಡಳಿತ ಮಾದರಿಯ ಮೇಲೆ ಕಳೆದ ಒಂದೂವರೆ ವರ್ಷಗಳಲ್ಲಿ ಜನರ ನಂಬಿಕೆ ಹೆಚ್ಚಾಗಿದೆ ಎಂದು ಮೋದಿ ಹೇಳಿದರು. ಬಿಹಾರ, ಕೇರಳ ಸೇರಿದಂತೆ ಹಲವು ರಾಜ್ಯಗಳ ಚುನಾವಣಾ ಫಲಿತಾಂಶಗಳು ಇದಕ್ಕೆ ಸಾಕ್ಷಿಯಾಗಿದೆ ಎಂದ ಅವರು, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯೇ ಬಿಜೆಪಿಯ ಶಕ್ತಿ ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅಸ್ಸಾಂನಲ್ಲಿ ಒಂದು ಕೊಂಬಿನ ಖಡ್ಗಮೃಗ ಬೇಟೆ ಹೆಚ್ಚಾಗಿತ್ತು ಎಂದು ಆರೋಪಿಸಿದ ಪ್ರಧಾನಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೇಟೆ ಪ್ರಕರಣಗಳನ್ನು ನಿಯಂತ್ರಿಸಲಾಗಿದ್ದು, 2025ರಲ್ಲಿ ಶೂನ್ಯ ಖಡ್ಗಮೃಗ ಬೇಟೆ ದಾಖಲಾಗಿದೆ ಎಂದು ಹೇಳಿದರು. ಇದೇ ವೇಳೆ, ಒಳನುಸುಳುವಿಕೆ ವಿಚಾರದಲ್ಲಿಯೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಸುಮಾರು ₹6,950 ಕೋಟಿ ಮೌಲ್ಯದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆ ವನ್ಯಜೀವಿಗಳ ಸಂರಕ್ಷಣೆ, ಸಂಪರ್ಕ ಸುಧಾರಣೆ ಹಾಗೂ ಮಾನವ–ಪ್ರಾಣಿ ಸಂಘರ್ಷ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.
