‘ಆರ್ಥಿಕ ಸುಧಾರಣೆಗಿತ ಸಾಮಾಜಿಕ ಸುಧಾರಣೆ ಆದ್ಯತೆಯಾಗಲಿ’; ಅರುಣ್ ಶ್ಯಾಮ್

ಬೆಂಗಳೂರು: ಪ್ರಭು ಶ್ರೀರಾಮನ ಆದರ್ಶ, ಶ್ರೀಕೃಷ್ಣನ ಉಪದೇಶ, ಅಣ್ಣಾ ಬಸವಣ್ಣರ ವಚನಗಳನ್ನು ಜನರು ಅಳವಡಿಸಿ ಅನುಸರಿಸಿದರೆ, ನಮಾಜದಲ್ಲಿ ಕಾನೂನು, ನ್ಯಾಯಾಲಯ ಸೇರಿದಂತೆ ನ್ಯಾಯಾಂಗ ವ್ಯವಸ್ಥೆಯೇ ಅವಶ್ಯಕತೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್ ಪ್ರತಿಪಾದಿಸಿದ್ದಾರೆ.

ಅನ್ನದಾನ, ಅಕ್ಷರದಾನದೊಂದಿಗೆ ನ್ಯಾಯದಾನಕ್ಕೂ ಹೆಸರಾದ ಸಿರಿಗೆರೆ ಮಠದ ಪರಮಪೂಜ್ಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಯೋಜಿಸಿದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಜನಪರ ಆಡಳಿತ ಹಾಗೂ ಜನಸ್ನೇಹಿ ಸಮಾಜಕ್ಕೆ ರಾಮ ರಾಜ್ಯವನ್ನು ನಾವು ಉದಾಹರಿಸುತ್ತೇವೆ. ಯಾಕೆಂದರೆ, ಶ್ರೀರಾಮಾನ ಆಶಯವು ಸಮಾಜದ ಹಿತಕ್ಕಾಗಿ ಇತ್ತು. ಶ್ರೀಕೃಷ್ಣನ ಉಪದೇಶ, ಅಣ್ಣ ಬಸವಣ್ಣರ ವಚನಗಳು ಕೂಡಾ ಶಾಂತಿ ಸಹಬಾಳ್ವೆ, ಸಾಮಾಜಿಕ ಹಿತಾಸಕ್ತಿಯ ಸೂತ್ರ ಎಂಬಂತಿದೆ. ಈ ಸೂತ್ರವನ್ನು ಅನುಸರಿಸಿದರೆ ಸಮಾಜದಲ್ಲಿ ವಿವಾದಗಳೇ ಇರಲ್ಲ ಎಂದು ಅರುಣ್ ಶ್ಯಾಮ್ ಪ್ರತಿಪಾದಿಸಿದರು.

ಹಿರಿಯ ವಕೀಲರೂ ಆದ ಅರುಣ್ ಶ್ಯಾಮ್ ಅವರು, “ನ್ಯಾಯಾಂಗ ಮತ್ತು ಕಾನೂನು“ ಕುರಿತು ಉಪನ್ಯಾಸ ನೀಡಿ ಹಲವಾರು ರಾಷ್ಟ್ರೀಯತೆಯ ವಿಚಾರಧಾರೆಗಳನ್ನು ಸಮಾಜದ ಮುಂದಿಟ್ಟರು. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಹಿರಿಯರ ಮಾತಿನ ಅರ್ಥ ಸಾರ್ವಕಾಲಿಕ ಸತ್ಯವಾಗಿದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ಹೇಗೆ ರಕ್ಷಿಸುತ್ತದೋ, ಸಮಾಜದ ಹಿತವನ್ನು ನಾವು ಬಯಸಿದಲ್ಲಿ ಸಾಮಾಜ ನಮ್ಮ ಹಿತ ಕಾಪಾಡುತ್ತದೆ. ಈ ನಂಬಿಕೆಯನ್ನೇ ದಾರ್ಶನಿಕರು ತಮ್ಮ ವಚನಗಳ ಮೂಲಕ ಸಾರಿ ಹೇಳಿದ್ದಾರೆ ಎಂದು ಅವರು ಬಣ್ಣಿಸಿದರು. ಈಗಿನ ವ್ಯವಸ್ಥೆಯಲ್ಲಿ ಅಭಿವೃದ್ಧಿ ಯನ್ನಷ್ಟೇ ನೋಡುವುದಲ್ಲ, ಸಾಮಾಜಿಕ ಪದ್ಧತಿ ಸುಧಾರಣೆಯತ್ತ ಹೆಚ್ಚಿನ ಗಮನಹರಿಸುವ ಅಗತ್ಯ ಇದೆ. ಅಂತಿಮವಾಗಿ ಸಾಮಾಜಿಕ ಸಾಮರಸ್ಯವು ಮನುಕುಲವನ್ನು ಉಳಿಸಬಲ್ಲದು ಎಂದವರು ಹೇಳಿದರು.

ಸಿರಿಗೆರೆ ಮಠದಲ್ಲಿ ಸ್ವಾಮೀಜಿಗಳು ‘ನ್ಯಾಯಪೀಠ’ ಸ್ಥಾಪಿಸಿ ‘ನ್ಯಾಯದಾನ’ ನೀಡುವ ನ್ಯಾಯಮೂರ್ತಿಗಳಾಗಿರುವುದು ಇಲ್ಲಿನ ವಿಶೇಷತೆ ಎಂದು ಅರುಣ್ ಶ್ಯಾಮ್ ಕೊಂಡಾಡಿದರು.

Related posts