ಲಾಕ್ ಡೌನ್ ವಿಸ್ತರಣೆ; ಒತ್ತಡಕ್ಕೆ ಮಣಿಯುತ್ತಾರಾ ಮೋದಿ?

ಕೊರೋನಾ ಕಾರಣಕ್ಕಾಗಿ ಜಾರಿಯಲ್ಲಿರುವ ಲಾಕ್ ಡೌನ್ ಮುಂದುವರಿಯುತ್ತಾ? ಇಂಥದ್ದೊಂದು ಅನುಮಾನ ಜನರನ್ನು ಕಾಡುತ್ತಲೇ ಇವೆ. ಜನರು ಈ ಬಗ್ಗೆ ಸಾವಿರ ಪ್ರಶ್ನೆಗಳನ್ನು ಮುಂದಿಟ್ಟರೂ ಕೇಂದ್ರ ಸರ್ಕಾರ ಸೋಂಕು ನಿಯಂತ್ರಣದತ್ತ ಗಮನಕೇಂದ್ರೀಕರಿಸಿದೆಯೇ ಹೊರತು ಜನರ ಅನುಮಾನಗಳತ್ತ ಚಿತ್ತ ಹರಿಸಿಲ್ಲ.

ದೆಹಲಿ: ಚೀನಾದಲ್ಲಿ ಹುಟ್ಟಿರುವ ಕೋವಿಡ್-19 ವೈರಾಣು ಅಮೆರಿಕಾ, ಇಂಗ್ಲೆಂಡ್, ಇಟೆಲಿ ಸಹಿತ ಆರ್ಥಿಕ ಬಲಾಢ್ಯ ರಾಷ್ಟ್ರಗಳನ್ನೂ ನಡುಗಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ ಭಾರತವೇ ಸ್ವಲ್ಪ ಮಟ್ಟಿನಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಇಲ್ಲಿ ಸೋಂಕು ಹರಡುವಿಕೆಯ ವೇಗಕ್ಕೆ ಆರಂಭದಲ್ಲೇ ಬ್ರೇಕ್ ಬಿದ್ದಿದೆ. ವಿದೇಶದಿಂದ ಬಂದವರು ಹಾಗೂ ಅವರ ಮನೆಯವರು ಸೋಂಕಿಗೊಳಗಾಗಿದ್ದಾರೆ. ಇನ್ನೊಂದೆಡೆ ದೆಹಲಿಯ ನಿಜಾಮುದ್ದೀನ್ ಪ್ರಕರಣದಲ್ಲಿನ ಕೊರೋನಾ ಸೋಂಕಿತರಿಂದ ಒಂದಷ್ಟು ಮಂದಿಗೆ ವೈರಾಣು ಹರಡಿದೆ. ಅದನ್ನು ಬಿಟ್ಟರೆ ಆತಂಕಗೊಳ್ಳುವಷ್ಟು ಪ್ರಮಾಣದಲ್ಲಿ ಸೋಂಕು ಉಲ್ಬಣಗೊಂಡಿಲ್ಲ ಎಂಬುದು ಸಮಾಧಾನಕರ ಸಂಗತಿ.

 ಇನ್ನೊಂದೇ ವಾರ.. ಮುಂದೆ..?

ಈ ನಡುವೆ 3 ವಾರಗಳ ಲಾಕ್ ಡೌನ್ ಜಾರಿಯಲ್ಲಿದ್ದು ಇಂದಿಗೆ 15 ದಿನಗಳಾಗುತ್ತದೆ. ಇನ್ನೊಂದು ವಾರದಲ್ಲಿ ಸೋಂಕು ಪ್ರಮಾಣ ತಗ್ಗಿದಲ್ಲಿ ಮಾತ್ರ ಲಾಕ್ ಡೌನ್ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ನಡುವೆ ಪ್ರಸ್ತುತ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಮುಂದುವರಿಸುವುದೇ ಸೂಕ್ತ ಎಂದು  ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಲಾಕ್ ಡೌನ್ ಅವಧಿ ವಿಸ್ತರಿಸುವಂತೆ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.  ದೇಶದ ಆರ್ಥಿಕತೆಯನ್ನು ಹೇಗಾದರೂ ಪುನರುಜ್ಜೀವನಗೊಳಿಸಬಹುದು. ಆದರೆ, ಜನರ ಜೀವ ಕಳೆದು ಹೋದಲ್ಲಿ ಮತ್ತೆ ಪಡೆಯಲು ಸಾಧ್ಯವಿಲ್ಲ ಎಂದು ಚಂದ್ರಶೇಖರ್ ಅವರು ಆತಂಕ ತೋಡಿಕೊಂಡಿದ್ದಾರೆ.

ದೆಹಲಿ ಬೆಳವಣಿಗೆಯೇ ಚಿಂತೆ

ಈ ಮಧ್ಯೆ, ದೆಹಲಿ ನಿಜಾಮುದ್ದೀನ್ ಪ್ರಕರಣ ಬೆಳಕಿಗೆ ಬಂದ ನಂತರದ ಬೆಳವಣಿಗೆಯೇ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು. ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡ ಅನೇಕರು ಇನ್ನೂ ತಲೆಮರೆಸಿಕೊಂಡಿದ್ದು ಒಂದು ವೇಳೆ ಅವರಲ್ಲಿ ಯಾರಾದರೂ ಸೋಂಕಿತರಾಗಿದ್ದರೆ ಅವರ ಮೂಲಕ ಮತ್ತಷ್ಟು ಮಂದಿಗೆ ಹಬ್ಬುವ ಆತಂಕ ಸಹಜವಾಗಿಯೇ ಇದೆ. ಹಾಗಾಗಿ ಕೇಂದ್ರ ಸರ್ಕಾರವು ತಕ್ಷಣಕ್ಕೆ ಯಾವುದೇ ಸುಳಿವು ನೀಡಲು ಮುಂದಾಗುತ್ತಿಲ್ಲ. ಹೀಗಿರುವಾಗ ಜನ ಕೂಡಾ ಕಾದು  ನೋಡುವ ತಂತ್ರ ಅನುಸರಿಸಬೇಕಿದೆ.

Related posts