ಕೊರೋನಾ ಸಂಕಷ್ಟದ ಈ ಕಾಲದಲ್ಲಿ ಸೋಂಕು ನಿಯಂತ್ರಣಕ್ಕೆ ಸರ್ಕಾರ ತನ್ನೆಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ಇದೀಗ ದೇಶದ ಎಲ್ಲಾ ಜಿಲ್ಲೆಗಳನ್ನು ಝೋನ್’ಗಳನ್ನಾಗಿ ವರ್ಗೀಕರಿಸಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಬೆಂಗಳೂರು: ಕೊರೋನಾ ಅಟ್ಟಹಾಸಕ್ಕೆ ಇಡೀ ದೇಶವೇ ನಲುಗಿದ್ದು, ಸೋಂಕು ನಿಯಂತ್ರಣ ಸಂಬಂಧ ಲಾಕ್ ಡೌನ್ ವಿಸ್ತರಣೆಯಾಗಿದೆ. ಇದರ ಜೊತೆಗೆ ಕೋವಿಡ್-19 ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಹಾಟ್ ಸ್ಪಾಟ್ ಎಂದು ಘೋಷಿಸಲಾಗಿದೆ. ಜೊತೆಗೆ ರೆಡ್ ಝೋನ್ ಜಿಲ್ಲೆಗಳನ್ನೂ ಗುರುತಿಸಿ ತೀವ್ರ ನಿಗಾ ವಹಿಸಲಾಗುತ್ತಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ 170 ಜಿಲ್ಲೆಗಳನ್ನು ರೆಡ್ ಝೋನ್ ಎಂದು ಗುರುತಿಸಿದೆ. ಈ ಕುರಿತು ಕೇಂದ್ರವು ಬುಧವಾರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕ 8 ಜಿಲ್ಲೆಗಳನ್ನೂ ರೆಡ್ ಝೋನ್ ಎಂದು ಗುರುತಿಸಲಾಗಿದೆ.
ಕರುನಾಡಿನಲ್ಲಿ ರೆಡ್ ಝೋನ್ :
ರಾಜ್ಯದಲ್ಲಿ ಅತೀ ಹೆಚ್ಚು ಕೊರೋನಾ ಸೋಂಕು ಹೊಂದಿರುವ ಬೆಂಗಳೂರು ನಗರ ಕೂಡಾ ರೆಡ್ ಝೋನ್ ಪಟ್ಟಿಯಲ್ಲಿದೆ. ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲ್ಬುರ್ಗಿ ಜಿಲ್ಲೆಗಳು ಕೊರೋನಾ ಹಾಟ್’ಸ್ಪಾಟ್ ಜಿಲ್ಲೆಗಳಾಗಿವೆ ಕೇಂದ್ರ ಆರೋಗ್ಯ ಸಚಿವಾಲಯ ಘೋಷಣೆ ಮಾಡಿದೆ.
ಇದನ್ನೂ ಓದಿ.. ಕೊರೋನಾ ಕ್ರೌರ್ಯದ ಕರಿನೆರಳಲ್ಲಿದ್ದವರು ಈಗ ನಿರಾಳ.. ಇಲ್ಲಿ ಶಾಸಕರೇ ಹೀರೊ
ಲಾಕ್ ಡೌನ್ ಮೇ 3ರ ವರೆಗೆ ವಿಸ್ತರಣೆಯಾದ ಬಳಿಕ ಸೋಂಕು ನಿಯಂತ್ರಣಕ್ಕಾಗಿ ಹೊಸ ಪ್ರಯತ್ನ ನಡೆದಿದೆ. ಈ ಪೈಕಿ ಕೊರೋನಾ ಹಾಟ್’ಸ್ಪಾಟ್, ನಾನ್ ಹಾಟ್’ಸ್ಪಾಟ್ ಹಾಗೂ ಗ್ರೀನ್ ಎಂದು ಜಿಲ್ಲೆಗಳನ್ನು ವರ್ಗೀಕರಣ ಮಾಡಲಾಗಿದೆ. ದೇಶದ ಎಲ್ಲಾ ಮೆಟ್ರೋ ನಗರಗಳಲ್ಲಿ ಸೋಂಕು ಹೆಚ್ಚಾಗಿ ಕಂಡು ಬಂದಿರುವುದರಿಂದ ಎಲ್ಲಾ ನಗರಗಳು ರೆಡ್ ಝೋನ್’ನಲ್ಲಿವೆ.
ಈ ಹಾಟ್’ಸ್ಪಾಟ್ ಜಿಲ್ಲೆಗಳಲ್ಲಿ ಇನ್ನು ಮುಂದೆ 2 ಅಥವಾ ಹೆಚ್ಚು ಮಂದಿಗೆ ಸೋಂಕು ಕಂಡುಬಂದರೆ ಆ ಪ್ರದೇಶವನ್ನು ಸೀಲ್’ಡೌನ್ ಮಾಡಲಾಗುತ್ತದೆ. ಅಗತ್ಯ ವಸ್ತುಗಳಿಗೂ ಜನ ಹೊರಬರುವಂತಿಲ್ಲ. ಎಲ್ಲಾ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಅದರಲ್ಲೂ ಹೆಚ್ಚು ಮಂದಿಗೆ ಸೋಂಕು ಇದ್ದು ಮತ್ತಷ್ಟು ಮಂದಿಗೆ ಹರಡುವ ಪರಿಸ್ಥಿತಿ ಇದ್ದರೆ ಅಂತಹಾ ಪ್ರದೇಶಗಳನ್ನು ರೆಡ್ ಝೋನ್ ಎಂದು ಗುರುತಿಸಲಾಗುತ್ತದೆ. ಆ ಪ್ರದೇಶಕ್ಕೆ ಯಾರೂ ಒಳಬರುವಂತಿಲ್ಲ. ಹೊರ ಹೋಗುವಂತೆಯೂ ಇಲ್ಲ. ಆ ಪ್ರದೇಶದಲ್ಲಿ ಯಾವ ಅಂಗಡಿ-ಮುಂಗಟ್ಟುಗಳೂ ತೆರೆಯುವಂತಿಲ್ಲ. ಇನ್ನುಳಿದ ಝೋನ್’ಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತದೆ. ಅಲ್ಲಿ ದಿನಸಿ-ತರಕಾರಿ ಅಂಗಡಿಗಳು, ಔಷಧ ಅಂಗಡಿ, ಕ್ಲಿನಿಕ್’ಗಳು ಮಾತ್ರ ತೆರೆಯಲು ಅವಕಾಶವಿರುತ್ತದೆ. ಅಗತ್ಯ ವಸ್ತು ಖರೀದಿಗಷ್ಟೇ ಜನ ಮನೆಗಳಿಂದ ಹೊರಬರಬಹುದು.