ಬೆಂಗಳೂರು: ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲಿನ ಹಲ್ಲೆ ಪ್ರಕರಣ ಹಾಗೂ ಗಲಭೆ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕಾಯಾಚರಣೆ ನಡೆಸಿ 140 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.
ಕೊರೋನಾ ಸೋಂಕಿತರ ಸಂಪರ್ಕ ಹೊಂದಿದ್ದಾರೆನ್ನಲಾದ ಮಂದಿಯನ್ನು ಕ್ವಾರಂಟೈನ್’ಗೆ ಕಳುಹಿಸುವ ತೀರ್ಮಾನದ ವಿರುದ್ಧ ಭಾನುವಾರ ರಾತ್ರಿ ಪಾದರಾಯನಪುರದ ಜನ ಸಿಡಿದೆದ್ದಿದ್ದರು. ದೊಣ್ಣೆ ರಾಡುಗಳೊಂದಿಗೆ ಬೀದಿಗಿಳಿದ ಗುಂಪು ಮನಸೋ ಇಚ್ಛೆ ರಾದಾಂತ ನಡೆಸಿತು. ಪೊಲೀಸರು ಹಾಕಿದ್ದ ಬ್ಯಾರಿಕೆಡ್ ಹಾಗೂ ಪೆಂಡಾಲ್ ಗಳನ್ನೂ ಗಲಭೆಕೋರರು ಧ್ವಂಸ ಮಾಡಿದ್ದರು.
ಭಾನುವಾರ ರಾತ್ರಿಯೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಗಲಭೆ ಸಂಬಂಧ 54 ಮಂದಿಯನ್ನು ಬಂಧಿಸಿದ್ದರು. ಬಳಿಕ 5 ಪ್ರತ್ಯೇಕ ಎಫ್ಐಆರ್ ದಾಖಲಿಸಿ ಮತ್ತಷ್ಟು ಗಲಭೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದರು. ರಾತ್ರಿಯಾಗುವಷ್ಟರಲ್ಲಿ ಮತ್ತಷ್ಟು ಮಂದಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ನಡುವೆ ಬಂಧಿತರ ಸಂಖ್ಯೆ 140 ದಾಟಿದ್ದು ತಲೆ ಮರೆಸಿಕೊಂಡಿರುವ ಮತ್ತಷ್ಟು ಆರೋಪಿಗಳಿಗಾಗಿ ಬಲೇ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಗಲಭೆ ನಡೆದ 3-4 ಗಂಟೆಯಲ್ಲಿ ಎಲ್ಲಾ ಪ್ರಮುಖರನ್ನ ಅರೆಸ್ಟ್ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿರುವ ಪೊಲೀಸರ ಕ್ರಮಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಿನಂದಿಸಿದ್ದಾರೆ.