ಮಂಗಳೂರು: ಇಡೀ ಜಗತ್ತಿಗೆ ಕೊರೋನಾ ವೈರಸ್ ಹಾವಳಿ ಎದುರಾಗಿದೆ. ಅದರಲ್ಲೂ ಭಾರತ ಇದೀಗ ಸಂಕಷ್ಟದ ಸುಳಿಯಲ್ಲಿದೆ. ದಕ್ಷಿಣದ ರಾಜ್ಯಗಳೂ ವೈರಾಣು ಹಾವಳಿಯಿಂದ ತತ್ತರಿಸಿದ್ದು ನಿತ್ಯವೂ ಹೆಚ್ಚುತ್ತಿರುವ ಸೋಂಕಿನ ಸಂಖ್ಯೆಗಳಿಂದಾಗಿ ಆತಂಕವೂ ದುಪ್ಪಟ್ಟಾಗಿದೆ.
ನಡುವೆ ಕರ್ನಾಟಕ-ಕೇರಳ ಗಡಿಭಾಗದ ಜನ ಗೋಳನ್ನು ಯಾರೂ ಕೇಳುವವರಿಲ್ಲ. ದಕ್ಷಿಣ ಕನ್ನಡ ಜಿಲ್ಲಾಡಳಿತ ಜತೆ ಹೋರಾಟ ಮಾಡಿ ಕಾಸರಗೋಡು ಡೈಲಿ ಪಾಸ್ ಪಡೆದು ಗಡಿನಾಡ ಜನರು ನಿಟ್ಟುಸಿರು ಪಡೆಯುವ ವೇಳೆಗೆ ಈಗ ಕೇರಳ ಸರ್ಕಾರ ದೈನಂದಿನ ಪಾಸ್ ಮೇಲೆ ಸಂಚರಿಸುವವರನ್ನು ನಿರ್ಬಂಧಿಸಿದೆ.
ಗಡಿ ದಾಟಿ ಕರ್ನಾಟಕಕ್ಕೆ ತೆರಳಿದರೆ 28 ದಿನ ವಾಪಾಸ್ ಬರುವಂತಿಲ್ಲ. ದಕ್ಷಿಣ ಕನ್ನಡದಲ್ಲಿ ವಿವಿಧೆಡೆ ಕೆಲಸ ಮಾಡುವ ಕಾಸರಗೋಡು ನಿವಾಸಿಗಳು ಎಂದಿನಂತೆ ಬೆಳಗ್ಗೆ ಪಾಸ್ ಜತೆಗೆ ತಲಪಾಡಿ ಗಡಿ ಬಳಿ ಬಂದರೆ ಕೇರಳ ಪೊಲೀಸರ ಎಚ್ಚರಿಕೆಯ ಮಾತನ್ನು ಕೇಳಿ ದಂಗಾಗಿಬಿಡುತ್ತಿದ್ದಾರೆ.
ಕಾಸರಗೋಡು – ದಕ್ಷಿಣ ಕನ್ನಡ ಡೈಲಿ ಪಾಸ್ ಅನ್ನು ಕೇರಳ ಸರ್ಕಾರ ಸೋಮವಾರ ರದ್ದುಪಡಿಸಿದೆ. ಹಾಗಾಗಿ ಮಂಗಳೂರಿನ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಳಾ ಬದುಕು ತೂಗುಯ್ಯಾಲೆಯಲ್ಲಿದೆ. ತಲಪಾಡಿ ಗಡಿಯಲ್ಲಿ ಅಸಹಾಯಕರಂತೆ ಪ್ರಯಾಣಿಕರು ನಿಂತಿರುವ ದೃಶ್ಯ ಕಳೆದೆರಡು ದಿನಗಳಿಂದ ಕಂಡುಬರುತ್ತಿದೆ.
ಕೇರಳ ಸರ್ಕಾರದ ಹೊಸ ತೀರ್ಮಾನ ತಿಳಿಯದೆ ಬಂದವರು ಗಡಿ ಭಾಗದಲ್ಲಿ ಸಂದಿಗ್ಧತೆಯಲ್ಲಿ ಸಿಲುಕಿ ಪರದಾಡುವಂತಾಗಿದೆ. ನಮ್ಮ ಈ ಗೋಳನ್ನು ಯಾರೂ ಕೇಳುವಂತಿಲ್ಲ ಎನ್ನುವ ಸಾರ್ವಜನಿಕರು ವ್ಯವಸ್ಥೆಯ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.