ಬೆಂಗಳೂರು : ರಾಜ್ಯದಲ್ಲಿ ಅಗೋಚರ ವೈರಾಣು ಹಾವಳಿ ವ್ಯವಸ್ಥೆಗೆ ಸವಾಲಾಗಿದ್ದು ಪರಿಸ್ಥಿತಿ ನಿಭಾಯಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಅದರಲ್ಲೂ ಕೊರೋನಾ ಸೋಂಕಿನಿಂದಾಗಿ ಬೀದರ್ ಜಿಲ್ಲಾಸ್ಪತ್ರೆಯಲ್ಲಿ 53 ಮಂದಿಯ ಸಾವಿನ ಪ್ರಕರಣ ಅನೇಕಾನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈಗಾಗಲೇ ಕರ್ನಾಟಕ ಅತೀ ವೇಗದಲ್ಲಿ ಸೋಂಕು ಹರಡುವ ಪಟ್ಟಿಯಲ್ಲಿದೆ. ಅದಾಗಲೇ ಬೀದರ್ ಜಿಲ್ಲೆಯಲ್ಲಿನ ಈ ಸಾವಿನ ಪ್ರಕರಣ ಸರ್ಕಾರಕ್ಕೂ ಯಕ್ಷ ಪ್ರಶ್ನೆಯಾಗಿ ಕಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಸಂಬಂಧ ತಜ್ಞರ ಸಮಿತಿಯಿಂದ ಅವರು ವರದಿ ಕೇಳಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಕೆಲವು ಡೀನ್ಗಳಿಂದೀಚೆಗೆ 53 ಮಂದಿ ಸಾವನ್ನಪ್ಪಿದ್ದಾರೆನ್ನಲಾಗಿದ್ದು ಅವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿತ್ತೆನ್ನಲಾಗಿದೆ. ಈ ಪ್ರಕರಣದಿಂದಾಗಿ ಬೀದರ್ ದೇಶದ ಅಪಾಯಕಾರಿ ಜಿಲ್ಲೆಯ ಪಟ್ಟಿಯಲ್ಲಿ ಸೇರಿಕೊಂಡಿರುವುದರಿಂದಾಗಿ ಮುಖ್ಯಮಂತ್ರಿ ಕೂಡಾ ಅತಿಯಾಗಿ ತಲೆಕೆಡಿಸಿಕೊಂಡಿದ್ದಾರೆ.