ಬೆಂಗಳೂರು: ದೇಶಾದ್ಯಂತ ಕೊರೋನಾ ವಕ್ಕರಿಸಿದ್ದು ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಈ ವರೆಗೂ ಸಮರ್ಪಕ ಔಷಧ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಕೋವಿಡ್-19 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಫಲಾಫಲಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವೆಡೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಫಲ ಕಂಡಿರವ ಹಿನ್ನೆಲೆಯಲ್ಲಿ ಕರ್ನಾಟಕವೂ ಈ ಚಿಕಿತ್ಸೆಯತ್ತ ಒಲವು ತೋರಿದೆ.
ಕೋವಿಡ್ ಇಂಡಿಯಾ ಕ್ಯಾಂಪೈನ್ ಮತ್ತು ಹೆಚ್ ಸಿಜಿ ಆಸ್ಪತ್ರೆ ಸಹಯೋಗದಲ್ಲಿ ಮೊದಲ ಪ್ಲಾಸ್ಮಾ ಬ್ಯಾಂಕ್’ನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಈ ಪ್ಲಾಸ್ಮಾ ಬ್ಯಾಂಕ್’ನ್ನು ಉಪ ಮುಖ್ಯಮಂತ್ರಿ ಡಾ.ಅಶ್ವಥ ನಾರಾಯಣ ಹೆಚ್ ಸಿಜಿ ಆಸ್ಪತ್ರೆಯಲ್ಲಿ ನಿನ್ನೆ ಉದ್ಘಾಟಿಸಿದರು. ಸಂಸದ ತೇಜಸ್ವಿ ಸೂರ್ಯ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಾಯೋಗಿಕ ಪರೀಕ್ಷೆಯಲ್ಲಿ ಪ್ಲಾಸ್ಮಾ ಥೆರಪಿ ಉತ್ತಮ ಫಲಿತಾಂಶ ನೀಡಿದೆ. ಹಾಗಾಗಿ ಕೊರೋನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡುವಂತೆ ಹೆಚ್ ಸಿಜಿ ಗ್ಲೋಬಲ್ ಆಸ್ಪತ್ರೆ ನಿರ್ದೇಶಕ ಡಾ.ವಿಶಾಲ್ ರಾವ್ ಮನವಿ ಮಾಡಿಕೊಂಡರು.