ತುಳುನಾಡಿನ ಭೂಗತ ಇತಿಹಾಸ ಕರಾವಳಿಗಷ್ಟೇ ಸೀಮಿತವಲ್ಲ. ಮುಂಬೈ ಸಹಿತ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚಾಚಿಕೊಂಡದ್ದು ಕರಾಳ ಸತ್ಯ. ಅದರಲ್ಲೂ ಮಂಗಳೂರು ಸುತ್ತಮುತ್ತಲ ಪಾತಕ ಸಾಮ್ರಾಜ್ಯದ ಘಟನಾವಳಿಗಳು ರೋಮಾಂಚನ. ಪ್ರತಿಯೊಂದು ಕೃತ್ಯವೂ ಕರಾಳತೆಯ ಸನ್ನಿವೇಶವನ್ನು ಹುಟ್ಟುಹಾಕಿತ್ತು. ಆದರೆ ಖಡಕ್ ಪೋಲೀಸ್ ಅಧಿಕಾರಿಗಳ ಖದರ್ ಕುಡ್ಲದ ಕೆಲವು ಪುಂಡರ ಗ್ಯಾಂಗನ್ನು ಮಟ್ಟ ಹಾಕಿತ್ತು. ಇದೀಗ ಆ ಭೂಗತ ಜಗತ್ತು ಮತ್ತು ಖಾಕಿ ಖಾದರ್ ಸನ್ನಿವೇಶಗಳನ್ನು ನೆನಪಿಸುವ ಕಥೆಯು ಬೆಳ್ಳಿತೆರೆಯಲ್ಲಿ ಪ್ರತಿಧ್ವನಿಸಲಿದೆ.
ಏನಿದು ಕಥಾಹಂದರ?
ಕುಡ್ಲದ ಪಾತಕ ಲೋಕವನ್ನು ಸಿಡಿಗುಂಡಿನ ಚಂಡಮದ್ದಳೆ ಎಂಬುದಾಗಿ ಹೆಸರಾಂತ ಪತ್ರಕರ್ತ ರವಿಬೆಳಗೆರೆ ಬಣ್ಣಿಸಿದ್ದರು. ಕುಡ್ಲ ಅಂದರೆ ತುಳುನಾಡಿನ ರಾಜಧಾನಿ.
ಈ ತುಳುನಾಡು ಒಂದು ಕಾಲದಲ್ಲಿ ಪಾತಕ ಲೋಕದ ಹೆಡ್ ಕ್ವಾಟ್ರಾಸ್! ಏಳು ಕಡಲಾಚೆ ಕುಳಿತು ಭೂಗತ ಜಗತ್ತನ್ನು ಆಳಿದವರೆಲ್ಲ ಇಲ್ಲಿಂದಲೇ ಫೀಲ್ಡ್ ಗೆ ಎಂಟ್ರಿ ಕೊಟ್ಟವರು. ಎಕ್ಕೂರು, ಎಮ್ಮೆಕೆರೆ, ಬೋಳಾರ, ಮಠದ ಕಣಿ, ಬಳ್ಳಾಲ್ ಬಾಗ್, ಬರ್ಕೆ, ವಾಮಂಜೂರು, ಹೀಗೆ ಗಲ್ಲಿಗೊಂದರಂತೆ ಕುಡ್ಲದ ಪಾತಕ ಲೋಕ ಗರಿ ಬಿಚ್ಚಿತ್ತು. ಜಯಂತ್ ವಿ ಶೆಟ್ಟಿ, ವಿನಯ್ ಗಾವಂಕರ್, ಕೆ.ಸಿ.ಅಶೋಕನ್, ತಿಲಕ್ ಚಂದ್ರ ರಂತಹ ಖಡಕ್ ಖಾಕಿಗಳ ಖದರ್ ಈ ‘ಕುಡ್ಲದ ರೌಡಿಸಂ’ಗೆ ಒಂದು ಫುಲ್ ಸ್ಟಾಪ್ ಹಾಕುವಲ್ಲಿ ಭಾಗಶಃ ಯಶಸ್ವಿಯಾಗಿತ್ತು.
ದಶಕದ ಹಿಂದೆ ಕುಡ್ಲ ಪಾತಕ ಜಗತ್ತಿನ ಗ್ಯಾಂಗ್ ವಾರ್ ನಲ್ಲಿ ಹರಿದ ಅಷ್ಟು ರಕ್ತಗಳು ಅರಬ್ಬಿ ಸಮುದ್ರದಲ್ಲಿ ಹರಿದು ಅದರ ವಾಸನೆ ಏಳು ಕಡಲಾಚೆ ಕುಳಿತು ಇಲ್ಲಿನ ಪಾತಕ ಲೋಕವನ್ನು ಕಂಟ್ರೋಲ್ ಮಾಡುತ್ತಿದ್ದ ಡಾನ್ ಗಳ ಮೂಗಿಗೆ ಬಡಿಯುತ್ತಿತ್ತು. ಕುಡ್ಲದ ಪಾತಕ ಲೋಕ ನಿಂತಿರುವುದು ಎರಡೇ ಎರಡು ವಿಚಾರದಲ್ಲಿ ಒಂದು ಜಾತಿ ಇನ್ನೊಂದು ಪ್ರತಿಷ್ಠೆ. ಆದರೆ ಕುಡ್ಲದಿಂದ ಕೆಲವೇ ಮೈಲುಗಳ ಅಂತರದಲ್ಲಿ ಹರಿಯುವ ಪಲ್ಗುಣಿ ನದಿ ತೀರದಲ್ಲಿ ಬರೋ ಬರಿ ಹತ್ತಕ್ಕೂ ಹೆಚ್ಚು ಪಾತಕಿಗಳ ರಕ್ತಪಾತ ನಡೆದಿದೆ. ಇವೆಲ್ಲವೂ ಭೂಗತ ಜಗತ್ತಿನ ಅಂತರ್ಯುದ್ಧ ಆಗಿದ್ದರೂ ಅದಕ್ಕೆ ಜಾತಿ ಧರ್ಮದ ಬಣ್ಣವೂ ಇದೆ. ರಾಜಕೀಯದ ಕರಿ ನೆರಳು ಇದೆ.
ಈ ನಡುವೆ, ಕುಡ್ಲದ ಪಾತಕ ಜಗತ್ತಿನ ಜೊತೆ ಹೊಸತೊಂದು ಅಧ್ಯಾಯ ತಳುಕು ಹಾಕುತ್ತಿದೆ. ಹೊಸ ಕ್ಯಾರೆಕ್ಟರ್ ಎಂಟ್ರಿ ಕೊಡುತ್ತಿದೆ. ಅದೆಷ್ಟೋ ರಕ್ತ ಹರಿದ ಪಲ್ಗುಣಿ ತೀರದಲ್ಲಿ ಮತ್ತೆ ರಕ್ತ ಹರಿಸಲು ಕೈಯಲ್ಲಿ ಒಂದು ಕೋಳಿ ಬಾಲನ್ನು ಹಿಡಿದು ಅಂಕದ ಕಲಕ್ಕೆ ಇಲ್ಲೊಬ್ಬ ಇಳಿಯುತ್ತಿದ್ದಾನೆ. ಮುಂದಿನದು ಏನಿದ್ದರೂ ಬೆಳ್ಳಿ ತೆರೆಯ ಮೇಲೆ.. ಅಂದ ಹಾಗೆ, ಅಕ್ಟೊಬರ್ 2025 ರಿಂದ ಚಿತ್ರೀಕರಣ. ಮುಂದಿನ ವರ್ಷ ಬೆಳ್ಳಿಪರದೆಯಲ್ಲಿ ಕುಡ್ಲ ಪಾತಕ ಜಗತ್ತಿನ ಸಮಗ್ರ ಗ್ರಂಥ ಪ್ರತಿಬಿಂಬಿಸಲಿದೆಯಂತೆ.
ಪಾತಕಲೋಕದ ವೈಭವಿಕರಣ ಅಲ್ಲ:
ಇದು ಪಾತಕಲೋಕದ ವೈಭವಿಕರಣ ಅಲ್ಲ, ಆ ಕೆಟ್ಟ ಜಗತ್ತಿನತ್ತ ಆಸಕ್ತಿ ಬೆಳೆಸುವ ಯುವ ಸಮೂದಾಯಕ್ಕೊಂದು ವಿದಾಯದ ಅಭೂತಪೂರ್ವ ಸಂದೇಶ ಎನ್ನುತ್ತಾರೆ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ.
ಕುಡ್ಲದಲ್ಲಿನ ಇಂಥದೊಂದು ರಕ್ತ ಚರಿತ್ರೆಯ ಇತಿಹಾಸದ ಪುಟಗಳಿಗೆ ಇವರೇ ಆಕ್ಷನ್ ಕಟ್ ಹೇಳುತ್ತಿರುವುದು. ಕನ್ನಡ ಹಾಗೂ ತುಳು ಚಿತ್ರರಂಗದ ಅನುಭವಿ ನೀರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಅವರು, ಈ ಹಿಂದೆ ಎರಡು ದಶಕಗಳ ಕಾಲ ಕುಡ್ಲದ ನಿಯತಕಾಲಿಕ ಪತ್ರಿಕೆಯಲ್ಲಿ ಇಲ್ಲಿನ ಭೂಗತ ಲೋಕದ ಸಿರೀಸ್ ಬರೆದು ಓದುಗರನ್ನು ರೋಮಾಂಚನ ಗೊಳಿಸುತ್ತಿದ್ದರು. ಕುಡ್ಲದ ಕ್ರೈಮ್ ಜಗತ್ತಿನ ಕುರಿತು ಸಾಕಷ್ಟು ಅಧ್ಯಯನ ಮಾಡಿರುವ ಮೂಡುಶೆಡ್ಡೆ, ತಮ್ಮ ನಿರ್ದೇಶನದ ಈ ಐದನೇ ಚಿತ್ರವನ್ನು ತುಳು ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಸಿದ್ಧಗೊಳಿಸುತ್ತಾರಂತೆ.