ಬೆಂಗಳೂರು: ಆಗಸ್ಟ್ ತಿಂಗಳ 6 ನೇ ತಾರೀಕಿನಂದು ಆಮ್ ಆದ್ಮಿ ಪಕ್ಷ “ಆಪ್ ಕೇರ್” ಎನ್ನುವ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಅಭಿಯಾನ ಮೂಲಕ ಸಾರ್ವಜನಿಕರ ದೇಹದ ಉಷ್ಣತೆ ಹಾಗೂ ಆಮ್ಲಜನಕ ಮಟ್ಟವನ್ನು ಪರೀಕ್ಷಿಸಲಾಲಾಗಿದೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ಒದಗಿಸಿರುವ ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷಮೋಹನ್ ದಾಸರಿ, ಇದುವರೆಗೂ ಸುಮಾರು 1.27 ಲಕ್ಷ ಜನರನ್ನು ಭೇಟಿ ಮಾಡಿ ತಪಾಸಣೆಗೆ ಒಳಪಡಿಸಿದ್ದೇವೆ. 1 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಬೆಂಗಳೂರಿನ ಜನರಲ್ಲಿ ನಾವು ತಲುಪಿರುವುದು ಕೇವಲ ಶೇ 1 ರಷ್ಟು ಮಾತ್ರ ಆದ ಕಾರಣ “ಆಕ್ಸಿ ಮಿತ್ರ” ದೇಹದ ಆಮ್ಲಜನಕ ಪ್ರಮಾಣ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದೇವೆ ಎಂದು ತಿಳಿಸಿದರು.
ನಾವು ಬೆಂಗಳೂರಿನಾದ್ಯಂತದ ಜನರನ್ನು “ಆಕ್ಸಿಮಿತ್ರ ಅಭಿಯಾನ” ಕ್ಕೆ ಸ್ವಯಂಸೇವಕರಾಗಲು ಮತ್ತು ನಮ್ಮ ನಗರದ ಸಾವಿರಾರು ಜನರ ಜೀವ ಉಳಿಸಲು ಕೈಜೋಡಿಸುವ ಆಸಕ್ತಿ ಇರುವವರು ದೂರವಾಣಿ 8884431202 ಕ್ಕೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಆಪ್ ಕೇರ್ ಅಭಿಯಾನ ವೇಳೆ ಕೈಗೊಂಡ ಸಮೀಕ್ಷೆಯಲ್ಲಿ ತಿಳಿದ ಅಂಶದ ಪ್ರಕಾರ ಸುಮಾರು 10 ಜನರಲ್ಲಿ 4 ಜನ ಕಡಿಮೆ ಆಮ್ಲಜನಕದ ಮಟ್ಟ ಹೊಂದಿದ್ದಾರೆ. ಹೆಚ್ಚಿನ ಜನಸಾಮಾನ್ಯರಿಗೆ ಇದು ಕೊರೋನಾ ಸೋಂಕಿನ ರೋಗಲಕ್ಷಣ ಎಂದು ತಿಳಿಯದ ಕಾರಣ, ಅಂತಹವರಿಗೆ ಹೆಚ್ಚಿನ ಪರೀಕ್ಷೆಗಳನ್ನು ಮಾಡಿಸಲು ಸಹಾಯ ಮಾಡಲಾಯಿತು, ಆಸ್ಪತ್ರೆಗೆ ದಾಖಲಿಸಲಾಯಿತು, ಹಾಸಿಗೆ ಸಿಗುವಂತೆ ನೋಡಿಕೊಳ್ಳಲಾಯಿತು, ಸಾಕಷ್ಟು ಜನ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.