ಕೊರಳೇರಿದ ‘ಅಡಿಕೆ ಹಾರ’; ಮಂತ್ರಿ ಅರಗ ವೈಖರಿಗೆ ಮೋದಿ ಖುಷ್

ತುಮಕೂರು: ಗಣ್ಯಾತಿಗಣ್ಯರ ಆಗಮನ ಸಂದರ್ಭದಲ್ಲಿ ನಾಡಿನ ಸೊಗಡಿನ ಪ್ರತಿಬಿಂಬವೆಂಬಂತೆ ವಿಶೇಷ ರೀತಿ ಸನ್ಮನ  ಮಾಡುವುದು ಸಾಮಾನ್ಯ. ಅದರಲ್ಲೂ ಕರುನಾಡಿನಲ್ಲಿ ಮೈಸೂರು ಪೇಟ ತೊಡಿಸುವುದು, ಏಲಕ್ಕಿ ಹಾರ ಹಾಕುವುದು, ಮಲ್ಲಿಗೆಯ ಹಾರದೊಂದಿಗೆ ಸನ್ಮಾನಿಸುವುದು, ಇಳಕಲ್ ಸೀರೆ ಸಮರ್ಪಿಸುವುದು ಇತ್ಯಾದಿ ರೀತಿಯ ಗೌರವ ಸಾಮಾನ್ಯ. ಆದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಪರವಾಗಿ ಸನ್ಮಾನಿಸಿದ ವೈಖರಿ ನಾಡಿನ ಗಮನಸೆಳೆಯಿತು.

ಪ್ರಧಾನಿ ಮೋದಿಗೆ ತುಮಕೂರಿನ ಕಾರ್ಯಕ್ರಮದಲ್ಲಿ ಅಡಿಕೆಯ ಹಾರದೊಂದಿಗೆ ಸನ್ಮಾನಿಸಲಾಯಿತು. ಸ್ವತಃ ಅಡಿಕೆ ಕೃಷಿಕರೂ ಆದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪ್ರಧಾನಿಯನ್ನು ಅಡಿಕೆ ಹಾರದೊಂದಿಗೆ ಸನ್ಮಾನಿಸಿದರು.

ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಅರಗ ಜ್ಞಾನೇಂದ್ರ ಅವರು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಅಡಿಕೆ ಬೆಳೆಗಾರರ ಪರವಾಗಿ ಸುದೀರ್ಘ ಕಾಲದಿಂದ ಹೋರಾಟ ನಡೆಸುತ್ತಾ ರೈತರ ಬೆಂಬಲಕ್ಕೆ ನಿಂತಿರುವ ಅರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿ ಕ್ಷೇತ್ರದ ಶಾಸಕರು. ಅಡಿಕೆ ಬೆಳೆಗಾರರೇ ಸಿದ್ದಪಡಿಸಿರುವ ಈ ಅಡಿಕೆ ಹಾರವನ್ನು ಸಚಿವ ಅರಗ ಜ್ಞಾನೇಂದ್ರ ಅವರು ಪ್ರಧಾನಿಗೆ ಸಮರ್ಪಿಸಿದರು. ಈ ವಿಶಿಷ್ಟ ಹಾರವನ್ನು ಕಂಡು ಪ್ರಧಾನಿ  ನರೇಂದ್ರ ಮೋದಿ ಅವರು  ಖುಷಿಪಟ್ಟ ವೈಖರಿಯೂ ಅನನ್ಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. .

Related posts