ಬೀದರ್ : ಸಾವಿರಾರು ಬಸವ ಅನುಯಾಯಿಗಳ ಸಮ್ಮುಖದಲ್ಲಿ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನವರಿ 6ರಂದು ಹಳೆಯ ಅನುಭವ ಮಂಟಪದ ಹತ್ತಿರದ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಯಡಿಯೂರಪ್ಪ, ಇದು ಪೂರ್ವಜನ್ಮದ ಪುಣ್ಯ ಕಾರ್ಯ ಎಂದು ತಿಳಿಸಿದರು. ಅನುಭವ ಮಂಟಪ ನಿರ್ಮಾಣಕ್ಕೆ ಈಗಾಗಲೇ 100 ಕೋಟಿ ರೂ ಬಿಡುಗಡೆ ಮಾಡಿದ್ದು, ಇನ್ನು 100 ಕೋಟಿ ರೂಗಳನ್ನು ವಾರದೊಳಗೆ ಬಿಡುಗಡೆ ಮಾಡಿ, ಟೆಂಡರ್ ಪ್ರಕ್ರಿಯೆ ಪೂರ್ಣವಾದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಇತಿಹಾಸದಲ್ಲಿ ಇಂದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ ಎಂದ ಅವರು, ಸಾಧನೆ ಮಾತನಾಡಬೇಕು. ಮಾತಾಡುವುದು ಸಾಧನೆಯಾಗಬಾರದು ಎನ್ನುವುದು ತಮ್ಮ ಮನೋಭಾವವಾಗಿದೆ. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಅಂತೆಯೇ ಎರಡು ವರ್ಷದೊಳಗೆ ಅನುಭವ ಮಂಟಪ ನಿರ್ಮಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.
ಅವರು ಇವರು ಎನ್ನದೇ ಎಲ್ಲ ಸಮುದಾಯದ ಜನರು ಸೇರಿ ಚರ್ಚಿಸಿ ಚಿಂತನ ಮಂಥನ ನಡೆಸುತ್ತಿದ್ದ ಅನುಭವ ಮಂಟಪವು ಆದರ್ಶ ಸಂಸತ್ತಿನ ಮಾದರಿಯಾಗಿದೆ ಎಂದರು.
ಸಾಮಾಜಿಕ ಬದಲಾವಣೆ ತರುವಲ್ಲಿ ಅನುಭವ ಮಂಟಪದ ಪಾತ್ರವು ಅತೀ ಮಹತ್ವದ್ದಾಗಿದೆ. ಮನುಕುಲದ ಏಳ್ಗೆಗೆ ಇಡೀ ವಚನ ಸಾಹಿತ್ಯ ಮಾರ್ಗದರ್ಶಿಯಾಗಿದೆ ಎಂದರು. ಅಣ್ಣ ಬಸವಣ್ಣನವರು ಈ ಕಲ್ಯಾಣ ನಾಡಿನಿಂದ ಹೊರಹೊಮ್ಮಿದ ಈ ದೇಶ ಕಂಡ ಬಹುದೊಡ್ಡ ವಿಶ್ವಗುರು ಅನ್ನುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಗೋ.ರು.ಚ ಅವರಂತಹ ಇನ್ನೂ ಅನೇಕ ಹಿರಿಯ ಸಾಹಿತಿಗಳ ಸಲಹೆ ಪಡೆದು, ಈ ಭಾಗದ ಜನರ ಬೇಡಿಕೆಯಂತೆ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ, ಪ್ರತಿ ವರ್ಷ ಬಸವ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು. ಇಂತಹ ಒಳ್ಳೆಯ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರು ಮಾತನಾಡಿ, ಅನುಭವ ಮಂಟಪದ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ನನ್ನ ಬದುಕು ಪಾವನವಾಯ್ತು ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದರು. ನಮ್ಮ ಜೀವನದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ ಎಂದರು.
ಮಾನ್ಯ ಪ್ರಧಾನ ಮಂತ್ರಿಗಳು ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದಂತೆ, ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಅನುಭವ ಮಂಟಪ ನಿರ್ಮಾಣಕ್ಕೆ ಇಂದು ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಿದ್ದು ಕೂಡ ಒಂದು ಐತಿಹಾಸಿಕ ಪ್ರಯತ್ನ ಎಂದರು.