ಕೊರೋನಾ ಹಾವಳಿ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬುದು ಮಾರ್ಗಸೂಚಿ ನಿಯಮ. ಹೀಗಿದ್ದರೂ ನಿಯಮ ಉಲ್ಲಂಘಿಸಿ ಮಸೀದಿಯಲ್ಲಿ ಪ್ರಾಥನೆ ನಡೆದಿದೆ. ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲಬುರ್ಗಿ: ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಪ್ರಕರಣ ಕಲಬುರ್ಗಿ ಜಿಲ್ಲೆ ಸೇಡಂ ಬಳಿ ನಡೆದಿದೆ. ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ.
ಕೊರೋನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ದೇಶದೆಲ್ಲೆಡೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಅದರಲ್ಲೂ ರೆಡ್ ಝೋನ್ನಲ್ಲಿರುವ ಕಲಬುರ್ಗಿ ಜಿಲ್ಲೆಯಲ್ಲಿ ನಿಯಮವನ್ನು ಬಿಗಿಗೊಳಿಸಲಾಗಿದೆ. ಯಾವುದೇ ಸಭೆ, ಸಮಾರಂಭಗಳನ್ನು ನಿರ್ಬಂಧಿಸಲಾಗಿದ್ದು, ಯಾವುದೇ ಉತ್ಸವ, ಸಾಮೂಹಿಕ ಪ್ರಾರ್ಥನೆ ನಡೆಸುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಇದೇ ವೇಳೆ, ಯಾವುದೇ ಮಸೀದಿಯಲ್ಲಿ ಪ್ರಾರ್ಥನೆ ನಡೆಸದಂತೆ ಪೊಲೀಸರು ಮುಸ್ಲಿಂ ಮುಖಂಡರಲ್ಲೂ ಮನವಿ ಮಾಡಿದ್ದರು. ಪೊಲೀಸರ ಮನವಿಯನ್ನು ಬಹುತೇಕ ಮಸೀದಿಗಳಲ್ಲಿ ಪಾಲಿಸಲಾಗಿದ್ದರೂ, ಸೇಡಂ ಸಮೀಪದ ಟಿ.ಬೊಮ್ನನಳ್ಳಿ ಗ್ರಾಮದ ಮಸೀದಿಯಲ್ಲಿ ಕೆಲವರು ಉಲ್ಲಂಘಿಸಿದ್ದಾರೆ. ಮಂಗಳವಾರ ಸಂಜೆ ಸುಮಾರು 15 ಮಂದಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆನ್ನಲಾಗಿದೆ.
ಈ ಕುರಿತಂತೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸೇಡಂ ಠಾಣೆಯ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ 14 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಒಬ್ಬ ತಲೆಮರೆಸಿಕೊಂಡಿದ್ದು ಆತನಿಗಾಗಿಪೊಲೀಸರು ಶೋಧ ಕೈಗೊಂಡಿದ್ದಾರೆ.