ಡಿಸಿಎಂ ಜೊತೆ ಸಂವಾದ; ಬೆಳಗಾವಿ ಅಧಿವೇಶನದಲ್ಲೇ ವಿಧೇಯಕ ಮಂಡಿಸಲು ಬಿಎಎಫ್‌ ಆಗ್ರಹ

ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲೇ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಜಾರಿ ಸಂಬಂಧ ವಿಧೇಯಕ ಮಂಡಿಸಬೇಕೆಂದು ಬೆಂಗಳೂರು ಅಪಾರ್ಟ್‌ಮೆಂಟ್‌ ಫೇಡರೇಷನ್‌ (BAF) ಅಧ್ಯಕ್ಷ ಸತೀಶ್‌ ಮಲ್ಯ ಆಗ್ರಹಿಸಿದ್ದಾರೆ.

ವಿಧಾನಸೌಧದ ಬ್ವಾಂಕ್ವೇಟ್‌ ಹಾಲ್‌ನಲ್ಲಿ ಗುರುವಾರ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌, ಅಪಾರ್ಟ್‌ಮೆಂಟ್‌ ಮಾಲೀಕರ ಜೊತೆ ವಿಶೇಷ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಅಪಾರ್ಟ್‌ಮೆಂಟ್‌ ಫೇಡರೇಷನ್‌ (BAF) ಅಧ್ಯಕ್ಷ ಸತೀಶ್‌ ಮಲ್ಯ, ಬೆಳಗಾವಿ ಅಧಿವೇಶನದಲ್ಲೇ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ ಜಾರಿ ಸಂಬಂಧ ವಿಧೇಯಕ ಮಂಡಿಸಬೇಕೆಂದು ಆಗ್ರಹಿಸಿದರು.

ಡಿ.ಕೆ.ಶಿವಕುಮಾರ್‌ ಅವರು ಸಲಹೆಗಳನ್ನು ಪಡೆದರು. ಅಪಾರ್ಟ್ಮೆಂಟ್ ನಿವಾಸಿಗಳ ಆಗ್ರಹಗಳನ್ನು ಶೀಘ್ರವೇ ವಿಧೇಯಕದಲ್ಲಿ ಅಳವಡಿಸಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಬೇಕು ಎನ್ನುವುದು ಸತೀಶ್‌ ಮಲ್ಯ ಗಮನಸೆಳೆದರು.

ಸಂವಾದ ಕಾರ್ಯಕ್ರಮ ನಂತರ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಕಾರ್ಯಕ್ರಮ. 1972 ರಲ್ಲಿ ಜಾರಿಗೆ ಬಂದಿರುವಂತಹ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ ಬಹಳಷ್ಟು ಗೊಂದಲದಿಂದ ಕೂಡಿದೆ. ಇದನ್ನು ಸರಿಪಡಿಸಲು ಈಗಾಗಲೇ ಪ್ರಸ್ತಾಪಿಸಲಾಗಿರುವಂತಹ ಹೊಸ ಸಮಗ್ರ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಯಲ್ಲಿ ಉತ್ತಮ ಅಂಶಗಳನ್ನು ಅಳವಡಿಸಲಾಗಿದೆ. ಈ ಕಾಯ್ದೆ ಅನುಷ್ಠಾನ ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಡಿಸಿಎಂ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿನಮ್ಮ ಸಲಹೆಗಳನ್ನು ಅಳವಡಿಸಿ, ಬೆಳಗಾವಿಯಲ್ಲಿ ಅಧಿವೇಶನದಲ್ಲೀ ಮಂಡಿಸಬೇಕು. ಸರಿಯಾದ ಕಾಯ್ದೆಯ ಬೆಂಬಲವಿಲ್ಲದೆ ಅಪಾರ್ಟ್‌ಮೆಂಟ್‌ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಸಂವಾದ ಕಾರ್ಯಕ್ರಮ ನಮಗೆ ಸಂತಸ ತಂದಿದೆ. ಆದರೆ, ಈ ವಿಧೇಯಕವನ್ನು ಈ ಬಾರಿಯ ಅಧಿವೇಶನದಲ್ಲೇ ಮಂಡಿಸಿ ಜಾರಿಗೊಳಿಸುವುದು ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎನ್ನುವುದು ನಮ್ಮ ಮನವಿಯಾಗಿದೆ ಎಂದರು.

BAF ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್, BAF ಖಜಾಂಚಿ ಕಿರಣ್ ಹೆಬ್ಬಾರ್ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಅಪಾರ್ಟ್‌ಮೆಂಟ್‌ ಮಾಲೀಕರು, ಫೆಡರೇಷನ್‌ ಪ್ರತಿನಿಧಿಗಳು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related posts