ಬೆಂಗಳೂರು: ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್’ಗೆ ಕರೆ ನೀಡಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಲವಂತದಿಂದ ಬಂದ್ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮರಾಠಿಗರು ಸಹ ನಮ್ಮ ರಾಜ್ಯದ ಕನ್ನಡಿಗರೇ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಮರಾಠಾ ಅಭಿವೃದ್ಧಿಗಾಗಿ ಮಾಡಿರುವ ಪ್ರಾಧಿಕಾರ. ಮರಾಠಿಗರು ಕೂಡ ಕಟ್ಟಾ ಹಿಂದುತ್ವ ವಾದಿಗಳು. ಬೆಳಗಾವಿಯ ವಿಶ್ವಸಮ್ಮೇಳನದಲ್ಲೂ ಅವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದ ಯಡಿಯೂರಪ್ಪ, ಸರ್ಕಾರ ಮರಾಠಾ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುತ್ತಿದೆಯೇ ವಿನಃ ಬೇರೆ ಯಾವುದೋ ಕಾರಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಬಲವಂತದಿಂದ ಬಂದ್ ನಡೆಸಿದರೆ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.