ಬೆಂಗಳೂರು: ನವೆಂಬರ್ 19ರಿಂದ ನಡೆಯಲಿರುವ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬಿಟಿಎಸ್)ಯಲ್ಲಿ ಮಹತ್ವದ 12 ಒಪ್ಪಂದಗಳಿಗೆ ಜಾಗತಿಕ ಆವಿಷ್ಕಾರ ಮೈತ್ರಿಕೂಟದ (GIA) ಪಾಲುದಾರ ದೇಶಗಳ ಜತೆ ಸಹಿ ಹಾಕಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ತಂತ್ರಜ್ಞಾನ ಶೃಂಗಸಭೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸೋಮವಾರ ವಿವಿಧ ದೇಶಗಳ ಉನ್ನತ ರಾಜತಾಂತ್ರಿಕ ಅಧಿಕಾರಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ನಡುವೆಯೂ ನಡೆಯುತ್ತಿರುವ ಅತಿದೊಡ್ಡ ಪ್ರಮಾಣದ ಈ ಶೃಂಗದಲ್ಲಿ ಸುಮಾರು 25ಕ್ಕೂ ಹೆಚ್ಚು ದೇಶಗಳು ಭಾಗಿಯಾಗುತ್ತಿದ್ದು, ತಂತ್ರಜ್ಞಾನದ ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳು ಆಗಲಿವೆ. ಈ ಪೈಕಿ ಏಳು ಒಪ್ಪಂದಗಳು ಸಹಿಗೂ ಸಿದ್ಧವಾಗಿವೆ ಎಂದರು.
ಈ ಹಿಂದೆ ಮಾಡಿಕೊಂಡಿರುವ ಒಪ್ಪಂದಗಳ ಅನುಷ್ಠಾನಕ್ಕೆ ಇನ್ನಷ್ಟು ವೇಗ ನೀಡಲಾಗುವುದು. ಜತೆಗೆ, ಹೊಸ ಒಪ್ಪಂದಗಳನ್ನು ಕಾಲಮಿತಿಯೊಳಗೆ, ಪೂರ್ವ ನಿಗದಿಯಂತೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು. ಒಪ್ಪಂದಗಳ ಫಲಶ್ರುತಿ ಬೇಗ ಸಿಗುವ ಗುರಿಯೊಂದಿಗೆ ಪಾಲುದಾರ ದೇಶಗಳ ಜತೆ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.