ಹಗರಣಗಳ ಆರೋಪ ಹಿನ್ನೆಲೆ; BBMPಯ‌ಲ್ಲಿ ಯಾವುದೇ ಆರ್ಥಿಕ ನಿರ್ಧಾರ ಕೈಗೊಳ್ಳದಂತೆ ತುಷಾರ್ ಗಿರಿನಾಥ್‌ಗೆ ಆದೇಶಿಸಿ; ಸರ್ಕಾರಕ್ಕೆ ರಮೇಶ್ ಬಾಬು ಪತ್ರ

ಹಗರಣಗಳ ಆರೋಪ ಹಿನ್ನೆಲೆ BBMPಯ‌ಲ್ಲಿ ಯಾವುದೇ ಆರ್ಥಿಕ ನಿರ್ಧಾರ ಕೈಗೊಳ್ಳದಂತೆ ಆಯುಕ್ತ ತುಷಾರ್ ಗಿರಿನಾಥ್‌ ಅವರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಸರ್ಕಾದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಕೆಲಸ ನಿರ್ವಹಿಸುತ್ತಿದ್ದು, ಅವರ ವಿರುದ್ದ ತಮ್ಮ ಅಧಿಕಾರದ ಅವಧಿಯಲ್ಲಿ ಕಾಮಗಾರಿಗಳ ಸಹಿತವಾಗಿ ಹಲವಾರು ಅಕ್ರಮಗಳಿಗೆ ಅವಕಾಶ ಕೊಟ್ಟಿರುವ ಆರೋಪ ಇದೆ. ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಯ ಚುನಾವಣಾ ಅಧಿಕಾರಿಯಾಗಿ ‘ಚಿಲುಮೆ’ ಎಂಬ ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿಯ ಖಾಸಗಿ ವಿವರಗಳನ್ನು ಸಂಗ್ರಹಿಸುವ ಅವಕಾಶ ನೀಡುವ ಮೂಲಕ ಅಕ್ರಮ ಎಸಗಿದ ಗುರುತರ ಆರೋಪವೂ ಇದೆ. ಇವರು ತ್ಮಫಂ ಅವಧಿಯಲ್ಲಿ ಬಿಬಿಎಂ ಪಿ ವ್ಯಾಪ್ತಿಯಲ್ಲಿ ಅಕ್ರಮ ಎ ಖಾತೆಗೆ ಅವಕಾಶ ನೀಡಿರುವ ಆರೋಪವೂ ಕೇಳಿಬಂದಿದೆ ಈ ಬಗ್ಗೆ ನೂತನ ಸರ್ಕಾರ ತನಿಖೆ ನಡೆಸಲಿದೆ ಎಂದು ರಮೇಶ್ ಬಾಬು ಅವರು ಈ ಪತ್ರದಲ್ಲಿ ಬೆಳಕು ಚೆಲ್ಲಿದ್ದಾರೆ.

ರಾಜ್ಯದ ನೂತನ ಸರ್ಕಾರವು ಬಿಬಿಎಂ ಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಮೇಲೆ ಅವರ ಅವಧಿಯಲ್ಲಿ ಬಂದಿರುವ ಆರೋಪಗಳ ಮೇಲೆ ವಿಶೇಷ ತನಿಖೆ ನಡೆಸಬೇಕಾಗಿರುತ್ತದೆ. ಚಿಲುಮೆ ಸಂಸ್ಥೆಯ ಮತದಾರರ ಪಟ್ಟಿಯ ಸಂಬಂಧ ತನಿಖಾ ಅಧಿಕಾರಿ ನೀಡಿರುವ ವರದಿ ಅಪೂರ್ಣವಾಗಿರುತ್ತದೆ. ಇವರ ತಪ್ಪುಗಳನ್ನು ಬಯಲಿಗೆ ಎಳೆಯುವ ಯಾವುದೇ ಪ್ರಯತ್ನ ನಡೆದಿರುವುದಿಲ್ಲ. ಇವರ ರಕ್ಷಣೆಗಾಗಿ ಬೇರೆ ಅಧಿಕಾರಿಗಳನ್ನು ತಲೆದಂಡ ಮಾಡಲಾಯಿತು. ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳುವ ಕಾರಣಕ್ಕಾಗಿ ಎ ಖಾತಾ ಸಂಬಂಧ ಇತರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿರುತ್ತಾರೆ. ತಮ್ಮ ಮೇಲಿನ ಗುರುತರವಾದ ಆರೋಪಗಳಿಂದ ತಪ್ಪಿಸಿಕೊಳ್ಳಲು ಇವರು ಈ ರೀತಿಯ ಹೇಳಿಕೆ ಮಾಡಿರುತ್ತಾರೆ ಎಂದು ರಮೇಶ್ ಬಾಬು ಅವರು ಸಿಎಸ್‌ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಚಿಲುಮೆ ಖಾಸಗಿ ಸಂಸ್ಥೆಯ ಮತದಾರರ ಪಟ್ಟಿಯ ಅಕ್ರಮಗಳಿಗೆ ಸಂಬಂಧಪಟ್ಟಂತೆ ನೂತನ ಸರ್ಕಾರವು ಇವರ ಮೇಲೆ ವಿಶೇಷ ತನಿಖಾ ತಂಡವನ್ನು ರಚಿಸಬೇಕಾಗಿರುತ್ತದೆ. ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಾಗಿ ಇವರ ಅವಧಿಯಲ್ಲಿ ನಡೆದಿರಬಹುದಾದ ಅಕ್ರಮಗಳ ಕುರಿತು ವಿಶೇಷ ತನಿಖೆ ನಡೆಯಬೇಕಾಗಿರುತ್ತದೆ. ಹೊಸ ಸರ್ಕಾರ ಆಡಳಿತಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಮಹಾನಗರ ಪಾಲಿಕೆಗೆ ಸಂಬಂಧಪಟ್ಟಂತೆ ಇವರು ಯಾವುದೇ ಆರ್ಥಿಕ ನಿರ್ಣಯಗಳನ್ನು ತೆಗೆದುಕೊಳ್ಳದಂತೆ ನಿರ್ದೇಶನ ನೀಡಿ. ಮತದಾರರ ಪಟ್ಟಿಯ ಅಕ್ರಮಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ವತಿಯಿಂದ ತನಿಖೆ ಕೈಗೊಳ್ಳಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿರುವ ರಮೇಶ್ ಬಾಬು, ಸಾರ್ವಜನಿಕ ಹಿತದೃಷ್ಟಿಯಿಂದ ಇವರ ಅವಧಿಯಲ್ಲಿ ಆಗಿರುವ ಮಹಾನಗರ ಪಾಲಿಕೆಯ ಹಗರಣಗಳ ಆರೋಪಗಳನ್ನು ತನಿಖೆಗೆ ಒಳಪಡಿಸುವುದು ಅವಶ್ಯಕ ಆಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related posts