ರಾಹುಲ್ ಹೇಳಿಕೆ ಬಗೆಗಿನ ತನಿಖೆಯ ಆಸಕ್ತಿ ಕರ್ನಾಟಕದ ಭ್ರಷ್ಟಾಚಾರ ಬಗ್ಗೆ ಏಕಿಲ್ಲ? ಮೋದಿ, ಶಾ ಬಗ್ಗೆ ಖರ್ಗೆ ಟೀಕಾಸ್ತ್ರ

ಬೆಳಗಾವಿ: ಕಾಶ್ಮೀರಲ್ಲಿ ಇತ್ತೀಚೆಗಷ್ಟೇ ಹೇಳಿಕೆ ನೀಡಿರುವ ರಾಹುಲ್ ಗಾಂಧಿಯವರನ್ನು ಹುಡುಕುತ್ತಾ ಬರುವ ಬಿಜೆಪಿ ಸರ್ಕಾರ, ಕರ್ನಾಟಕದ ಭ್ರಷ್ಟಾಚಾರ ಬಗ್ಗೆ ಕಾಂಗ್ರೆಸ್ ಪಕ್ಷ ದಾಖಲೆಗಳನ್ನು ನೀಡಿದರೂ ತನಿಖೆಗೆ ಆದೇಶಿಸಿಲ್ಲವೇಕೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಯುವಜನ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷ ಇಲ್ಲಿನ 18 ಕ್ಷೇತ್ರಗಳಲ್ಲಿ 15-16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿದ್ದರು. ಈ ಬಾರಿ ನಮ್ಮ ನಾಯಕರ ಒಘ್ಗಟ್ಟು ನೋಡಿದರೆ ಈ ಬಾರಿ 18ಕ್ಕೆ 18 ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದರು.

ರಾಜ್ಯದ ಇತಿಹಾಸದಲ್ಲಿ ಇಷ್ಟು ಭ್ರಷ್ಟಾಚಾರ ಇರಲಿಲ್ಲ. ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಹೇಳಿದ್ದಾರೆ. ಇವರು ಮೋದಿ ಅವರಿಗೆ ದೂರು ನೀಡಿದ್ದಾರೆ. ಗುತ್ತಿಗೆದಾರರ ದೂರು ನೀಡಿದಾಗ ಇದರ ತನಿಖೆಗೆ ಅಮಿತ್ ಶಾ ಅವರು ಯಾಕೆ ಆದೇಶ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದದ ವರೆಗೆ ಎಲ್ಲಾ ವರ್ಗ, ಸಮುದಾಯದವರನ್ನು ಮಾತನಾಡಿಸುತ್ತಾ ಅವರ ಸಂಕಷ್ಟ ಆಲಿಸಿ 4 ಸಾವಿರ ಕಿ.ಮೀ ಪಾದಯಾತ್ರೆ ಮಾಡಿದ್ದಾರೆ ಎಂದ ಖರ್ಗೆ, ಕಾಶ್ಮೀರದಲ್ಲಿ 46 ದಿನದ ಹಿಂದೆ ಹೇಳಿದ ಮಾತಿನ ಬಗ್ಗೆ ನಿನ್ನೆ ದೆಹಲಿ ಪೋಲೀಸರು ಸಾಕ್ಷಿ ಕೇಳಿಕೊಂಡು ರಾಹುಲ್ ಗಾಂಧಿ ಅವರ ಮನೆ ಮುಂದೆ ಹೋಗಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಸಾಕ್ಷಿ ನೀಡುತ್ತಿದ್ದರೂ ಇಲ್ಲಿ ತನಿಖೆ ಮಾಡುತ್ತಿಲ್ಲ. ರಾಜ್ಯದಲ್ಲಿ 100 ರೂ. ಕಾಮಗಾರಿ ಇದ್ದರೆ 200 ರೂ. ಅಂದಾಜು ನಿಗದಿ ಮಾಡಿ ರಾಜ್ಯದವರು 40% ಕೇಂದ್ರದವರು 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ದೂರಿದರು.

ಮೋದಿ ಅವರು ಬೆಳಗಾವಿಗೆ ಬಂದು ನನ್ನ ಬಗ್ಗೆ ಮಾತನಾಡಿದ್ದಾರೆ. ನನ್ನ ರಿಮೋಟ್ ಕಟ್ರೋಲ್ ಬೇರೆಯವರ ಬಳಿ ದೆ ಎಂದಿದ್ದಾರೆ. ನಿಮ್ಮ ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ. ಅದಾನಿ ಅವರ ಬಗ್ಗೆ ರಾಹುಲ್ ಗಾಂಧಿ ಅವರು ಪ್ರಶ್ನೆ ಕೇಳಿದರೆ ಅದನ್ನು ತೆಗೆದು ಹಾಕುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವವಿಲ್ಲ, ಜಾತಿವಾದ ಇದೆ, ಜಾತಿ ತಾರತಮ್ಯವಿದೆ ಎಂದು ಹೇಳಿದರೆ ಅದು ತಪ್ಪಾ? ಬಿಜೆಪಿಯವರು ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು.

ಇದು ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಾಡಿ ಮಲ್ಲಮ್ಮನ ನಾಡು. ಈ ಭಾಗದಲ್ಲಿ ವೀರರು ಶೂರರು ಇದ್ದಾರೆ. ಈ ಜನರನ್ನು ಇಡಿ, ಸಿಬಿಐ ಮಣಿಸುವುದಿಲ್ಲ. ಇವರ ಬೆದರಿಕೆಗೆ ರಾಹುಲ್ ಗಾಂಧಿ ಅವರು ಎಂದಿಗೂ ಹೆದರುವುದಿಲ್ಲ. ಇವರು ಎಷ್ಟು ದಿನ ತೊಂದರೆ ನೀಡುತ್ತಾರೋ ನೀಡಲಿ. ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ. ಮೋದಿ ಅವರೇ ನೀವು ನಮ್ಮನ್ನು ಮಣ್ಣಿನಲ್ಲಿ ಹೂತು ಹಾಕಲು ಪ್ರಯತ್ನಿಸಿ. ನಾವು ಬೀಜವಾಗಿದ್ದು, ನಾವು ಪದೇ ಪದೆ ಹುಟ್ಟಿಬರುತ್ತೇವೆ ಎಂದವರು ಹೇಳಿದರು.

ಕಾಂಗ್ರೆಸ್ ಪಕ್ಷ ಗೃಹಲಕ್ಷಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆ ಘೋಷಣೆ ನೀಡಲಾಗಿದೆ. ದೇಶದಲ್ಲಿ 50 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಅದನ್ನು ತುಂಬುತ್ತಿಲ್ಲ. ಇವರು ಹೇಳಿದ 2 ಕೋಟಿ ಉದ್ಯೋಗ ಎಲ್ಲಿ ಹೋದವು ಗೊತ್ತಿಲ್ಲ. ರಾಜ್ಯದಲ್ಲಿ 2.50 ಲಕ್ಷ ಉದ್ಯೋಗ ಖಾಲಿ ಇದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಒಂದೂವರೆ ವರ್ಷಗಳಲ್ಲಿ ಎಲ್ಲಾ ಹುದ್ದೆ ತುಂಬುತ್ತೇವೆ ಎಂದು ಭರವಸೆ ನೀಡಿದರು.

 

Related posts