ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ಬಳಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪಿದ ಘಟನೆ ಇಂದು ವರದಿಯಾಗಿದೆ. ಬೆಳ್ತಂಗಡಿ ಸಮೀಪದ ನೆರಿಯಾ ಗ್ರಾಮದ ನಿವಾಸಿ ಎನ್ನಲಾದ 19 ವರ್ಷದ ಸುಮಾ ಎಂಬ ನರ್ಸಿಂಗ್ ವಿದ್ಯಾರ್ಥಿನಿ ಲೋ ಬಿಪಿಯಿಂದಾಗಿ ಅಸ್ವಸ್ಥಳಾಗಿದ್ದಾಳೆ. ಆಗಸ್ಟ್ 13ರಂದು ಈಕೆ ಅಸ್ವಸ್ಥಳಾಗಿದ್ದು ಚಿಕಿತ್ಸೆಗೆ ಸ್ಪಂಧಿಸದೆ ಕೊನೆಯುಸಿರೆಳೆದಿದ್ದಾಳೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹದಿಹರೆಯದವರಲ್ಲೇ ಹೆಚ್ಚು ಸಮಸ್ಯೆ ಯಾಕೆ?
ಇತ್ತೀಚಿನ ದಿನಗಳಲ್ಲಿ ಯುವಜನರೇ ಸಾವಿನ ದವಡೆಗೆ ತಳ್ಳಲ್ಪಡುತ್ತಿರುವುದು ವಿಷಾದನೀಯ ಸಂಗತಿ. ಹದಿ ಹರೆಯದ ಮಂದಿಯೇ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ರಕ್ತದೊತ್ತಡ, ಹಾಗೂ ರಕ್ತ ಹೆಪ್ಪುಗಟ್ಟುವಿಕೆಯ ಕಾರಣದಿಂದಾಗಿ ಹೃದಯಾಘಾತಕ್ಕೊಳಗಾಗುತ್ತಿದ್ದಾರೆ. ಈ ಬೆಳವಣಿಗೆ ವೈದ್ಯಕೀಯ ಕ್ಷೇತ್ರಕ್ಕೂ ಸವಾಲೆಂಬಂತಿದೆ.
ಪ್ರಸ್ತುತ ಆಹಾರ ಪದ್ಧತಿ, ಖಾದ್ಯತೈಲಗಳ ಬಳಕೆ, ಮುಂತಾದ ಕಾರಣಗಳು ಈ ರೀತಿಯ ಪ್ರಕರಣಗಳಿಗೆ ಕಾರಣವೂ ಹೌದು ಎನ್ನುತ್ತಾರೆ ವೈದ್ಯರು. ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಿದ್ದರೆ ಆಗಬಹುದಾದ ಅನಾಹುತವನ್ನು ತಡೆಯಬಹುದಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಯುವಜನರು ಅತಿಯಾದ ಆತ್ಮವಿಶ್ವಾಸದಿಂದಾಗಿ ಆರೋಗ್ಯ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ವೈದ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.