ಬೆಂಗಳೂರು: ಭ್ರಷ್ಟರ ಬೆನ್ನತ್ತಿರುವ ಲೋಕಾಯುಕ್ತ ಪೊಲೀಸರು ಗುರುವಾರ ಬೆಳ್ಳಂಬೆಳಿಗ್ಗೆ ಮತ್ತೆ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿದ್ದಾರೆ. ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ದಾಳಿ ಕೈಗೊಂಡಿರುವ ಲೋಕಾ ಪೊಲೀಸರು ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು, ಕೊಡಗು, ಚಿತ್ರದುರ್ಗ, ಬೀದರ್ ಸಹಿತ ಹಲವು ನಗರಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಬೆಂಗಳೂರುನಗರದ ಹತ್ತಕ್ಕೂ ಹೆಚ್ಚುಕಡೆ ದಾಳಿ ನಡೆಸಿರುವ ಲೋಕಾಯುಕ್ತ, ರಾಜ್ಯದ ಅಧಿಕಾರಿಗಳ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿ ಮಹದೇವಪುರ ವಲಯದ ಕಂದಾಯ ಅಧಿಕಾರಿ ನಟರಾಜ್ ಮನೆ ಮೇಲೆ ದಾಳಿ ನಡೆದರೆ, ಲೋಕಾಯುಕ್ತದ ಮತ್ತೊಂದು ತಂಡ, ರಾಮನಗರ ಜಿಲ್ಲೆ ಕನಕಪುರ ಸಮೀಪ ಶಿವನಹಳ್ಳಿ ಗ್ರಾಮದಲ್ಲಿರುವ ನಟರಾಜು ಮನೆ ಮೇಲೆ ಲಗ್ಗೆ ಹಾಕಿ ಪರಿಶೀಲನೆ ನಡೆಸಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿ ಆರ್.ಎಫ್.ಒ ಸತೀಶ್ ಮನೆ ಮೇಲೆ ಮತ್ತೊಂದು ತಂಡ ಕಾರ್ಯಾಚರಣೆ ನಡೆಸಿದೆ.
ಚಿತ್ರದುರ್ಗದ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ.ಮಹೇಶ್, ಪತ್ನಿ ಹೆಚ್.ಭಾರತಿ ಮನೆ ಮೇಲೆ ದಾಳಿ ನಡೆದಿದೆ. ಹೆಚ್.ಭಾರತಿ ಅವರು ಬಿಬಿಎಂಪಿ ಎಇ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ನಾಗರಾಜು ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಕೈಗೊಂಡಿರುವ ಲೋಕಾಯುಕ್ತ ತಂಡ ದಾಖಲೆಗಳನ್ನು ಪರಿಶೀಲಿಸಿವೆ.
ಕೊಡುಗು ಎಡಿಸಿ ನಂಜುಂಡೇಗೌಡ ಅವರ ಮನೆ ಮೇಲೂ ದಾಳಿ ನಡೆದಿದೆ.
ಕೊಪ್ಪಳ ನಿರ್ಮಿತಿ ಕೇಂದ್ರದ ಕಚೇರಿ ವ್ಯವಸ್ಥಾಪಕ ಮಂಜುನಾಥ ಬನ್ನಿಕೊಪ್ಪ ಅವರ ಮನೆ ಹಾಗೂ ಹುಲಗಿಯಲ್ಲಿನ ಲಾಡ್ಜ್ ಮೇಲೆ ದಾಳಿ ನಡೆದಿದೆ.
