ಮಂಗಳೂರು: ಕರಾವಳಿಯ ಸಾಂಪ್ರದಾಯಿಕ ಕಂಬಳೋತ್ಸವದ ರಂಗು ರಾಜಧಾನಿ ಬೆಂಗಳೂರಿಗೂ ಪಸರಿಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು “ಬೆಂಗಳೂರು ಕಂಬಳ-ನಮ್ಮ ಕಂಬಳ’ ಹೆಸರಲ್ಲಿ ಹೊಸ ಕಂಬಳ ಜಗತ್ತು ಅನಾವರಣಗೊಳ್ಳಲಿದೆ.
ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ‘ಬೆಂಗಳೂರು ಕಂಬಳ-ನಮ್ಮ ಕಂಬಳ’ಕ್ಕೆ ಭರ್ಜರಿ ತಯಾರಿ ಸಾಗಿದ್ದು, ಈ ಸಂಬಂಧ ತುಳುನಾಡಿನಲ್ಲೂ ಕಾರ್ಯತಂತ್ರ ನಡೆಯುತ್ತಿದೆ. ಈ ಸಂಬಂಧ ಮಂಗಳೂರಿನಲ್ಲಿ ಬಾನುವಾರ ನಡೆದ ಸಭೆ ಕಂಬಳ ಕಸರತ್ತಿನ ಕೇಂದ್ರಬಿಂದುವಾಯಿತು.
ಶಾಸಕ ಅಶೋಕ ರೈ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ , ಕಂಬಳ ಸಮಿತಿಯ ಪ್ರಮುಖರಾದ ಪಿ.ಆರ್. ಶೆಟ್ಟಿ, ಎರ್ಮಾಳ್ ರೋಹಿತ್ ಹೆಗ್ಡೆ, ಲೋಕೇಶ್, ವಿಜಯ ಕುಮಾರ್ ಕಂಗಿನಮನೆ, ಚಂದ್ರಹಾಸ್ ಸನಿಲ್, ಮುರಳೀಧರ್ ಸಹಿತ ಅನೇಕರು ಭಾಗವಹಿಸಿದ್ದರು.
ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ಒದಗಿಸಿದ ಶಾಸಕ ಅಶೋಕ್ ರೈ, ರಾಜಧಾನಿಯಲ್ಲಿ ‘ಬೆಂಗಳೂರು ಕಂಬಳ-ನಮ್ಮ ಕಂಬಳ’ ಮೊದಲ ಪ್ರಯೋಗವಾಗಿದ್ದು, ಇದರಲ್ಲಿ 125ಕ್ಕೂ ಅಧಿಕ ಜತೆ ಕೋಣಗಳು ಭಾಗವಹಿಸಲಿದೆ. ಜೊತೆಗೆ 7 ಲಕ್ಷಕ್ಕೂ ಹೆಚ್ಚು ಜನರು ಈ ಜನಪದ ಕಲೆಯನ್ನು ಸಾಕ್ಷೀಕರಿಸುವ ನಿರೀಕ್ಷೆಯಿದೆ ಎಂದರು.
ಕಂಬಳ ತಯಾರಿಯ ಸಡಗರ
ನವೆಂಬರ್ 23ರಂದು 125ಕ್ಕೂ ಹೆಚ್ಚು ಜತೆ ಕೋಣಗಳು ಮಂಗಳೂರಿನಿಂದ ಮೆರವಣಿಗೆ ಮೂಲಕ ಬೆಂಗಳೂರಿಗೆ ತೆರಳಲಿದೆ,
ಮಾರ್ಗ ಮಧ್ಯೆ ಹಾಸನದಲ್ಲಿ ಭವ್ಯ ಸ್ವಾಗತ ಸಿಗಲಿದೆ.
ಕಂಬಳ ಕೋಣಗಳ ಯಜಮಾನರ ಕೋರಿಕೆಯಂತೆ ಕೋಣಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ 6 ಟ್ಯಾಂಕರ್ ನೀರನ್ನು ದ.ಕ. ಜಿಲ್ಲೆಯಿಂದಲೇ ಕೊಂಡೊಯ್ಯಲಾಗತ್ತದೆ.
ಕಂಬಳದಲ್ಲಿ ವಿಜಯಿಯಾಗುವ ಕೋಣಗಳಿಗೆ ಚಿನ್ನದ ಬಹುಮಾನ ಸಿಗಲಿದೆ. ಪ್ರಥಮ ಬಹುಮಾನದ ಕೋಣಗಳಿಗೆ 2 ಪವನ್ ಬಂಗಾರ, ದ್ವಿತೀಯ ಸ್ಥಾನ ಗಳಿಸುವ ಕೋಣಗಳಿಗೆ 1 ಪವನ್ ಬಂಗಾರ, ಹಾಗೂ ಭಾಗವಹಿಸುವ ಪ್ರತೀ ಕೋಣಗಳಿಗೂ ಸ್ವರ್ಣ ಪದಕ ನೀಡಲಾಗುತ್ತದೆ.
ಕಂಬಳಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 145 ಮೀಟರ್ ಉದ್ದದ ಜೋಡುಕರೆ ನಿರ್ಮಿಸಲಾಗುವುದು.
ಈ ಕಂಬಳೋತ್ಸವ ಜಾತ್ರೆಯ ವೈಭವಕ್ಕೆ ಸಾಕ್ಷಿಯಾಗಲಿದೆ. ಕಂಬಳ ವೀಕ್ಷಿಸಲು ಗ್ಯಾಲರಿ ನಿರ್ಮಿಸಲಾಗುತ್ತದೆ.
150ಕ್ಕೂ ಹೆಚ್ಚು ಬಗೆಯ ಕರಾವಳಿ ಆಹಾರ, ತಿಂಡಿ ತಿನಿಸುಗಳು, ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುತ್ತದೆ.