ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿರುಗಾಳಿ ಎದ್ದಿದೆ. ಟಿಕೆಟ್ ಸಿಗದಿರುವುದರಿಂದ ಬೇಸತ್ತಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರು ಬಿಜೆಪಿ ತೊರೆಯುವುದಾಗಿ ಹೇಳಿದ್ದಾರೆ.
ತಮಗೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡದಿರುವ ಬಗ್ಗೆ ಅಸಮಾಧಾನಗೊಂಡಿರುವ ಲಕ್ಷ್ಮಣ್ ಸವದಿ, ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ ನಾಯಕರ ವಿರುದ್ದ ಆಕ್ರೋಶ ಹೊರಹಾಕಿದರು. ನನಗೆ ಟಿಕೆಟ್ ನೀಡುವುದಾಗಿ ಪಕ್ಷದ ಮುಖಂಡರು ಭರವಸೆ ನೀಡಿದ್ದರು. ಆದರೆ ಟಿಕೆಟ್ ನೀಡದೆ ಹೈಕಮಾಂಡ್ ದ್ರೋಹ ಮಾಡಿದೆ ಎಂದು ಲಕ್ಷ್ಮಣ್ ಸವದಿ ದೂರಿದರು.
ಬಿಜೆಪಿಗೆ ಗುಡ್ ಬೈ ಹೇಳುವುದಾಗಿ ಸುಳಿವು ನೀಡಿದ ಅವರು, ಈ ಬಗ್ಗೆ ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ನಡೆ ಬಗ್ಗೆ ತೀರ್ಮಾನಿಸುವುದಾಗಿ ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿಟ್ಟು ಹೊರಹಾಕಿದ ಅವರು ಮುಂದಿನ ದಿನದಲ್ಲಿ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದರು.