ಸಿದ್ದು ಸರ್ಕಾರದ ವಿರುದ್ದ ಬಿಜೆಪಿ ರಣಕಹಳೆ; ಸೆ.8ರಂದು ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರದ ಜನವಿರೋಧಿ ಮತ್ತು ರೈತವಿರೋಧಿ ನೀತಿಯನ್ನು ಖಂಡಿಸಿ ನಾಳೆ (ಸೆ. 8ರಂದು) ಬೆಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ.

ರಾಜ್ಯದಾದ್ಯಂತ ಮಳೆ ಇಲ್ಲದೆ ಬರ ಆವರಿಸಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸರಕಾರ ಸ್ಪಂದಿಸುತ್ತಿಲ್ಲ. 198ಕ್ಕಿಂತ ಹೆಚ್ಚು ತಾಲ್ಲೂಕುಗಳಲ್ಲಿ ಬರದ ದುಸ್ಥಿತಿ ಇದೆ. ಆದರೆ, ಬರಪೀಡಿತ ತಾಲ್ಲೂಕುಗಳನ್ನು ರಾಜ್ಯ ಸರಕಾರ ಇನ್ನೂ ಘೋಷಿಸಿಲ್ಲ ಹಾಗೂ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ಅವರು ಟೀಕಿಸಿದ್ದಾರೆ.

ದರ ಕರುಗಳಿಗೆ ಕುಡಿಯುವ ನೀರಿಲ್ಲ; ಮೇವೂ ಇಲ್ಲದ ಪರಿಸ್ಥಿತಿ ಇದೆ. ವಿದ್ಯುತ್ ಬಿಲ್ ದುಬಾರಿಯಾಗಿದ್ದರಿಂದ ಮಧ್ಯಮ ವರ್ಗದವರು ಪರಿತಪಿಸುತ್ತಿದ್ದಾರೆ. ಹಾಲಿನ ದರವನ್ನೂ ಹೆಚ್ಚಿಸಿದ್ದಾರೆ. ರಾಜ್ಯ ಸರಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಲಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರಕಾರ ಇದ್ದಾಗ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಹೆಚ್ಚುವರಿಯಾಗಿ 4 ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಅದನ್ನೂ ರದ್ದು ಮಾಡಿದ್ದಾರೆ. ರಾಜ್ಯದಲ್ಲಿ ನೂರಾರು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಕಾಂಗ್ರೆಸ್ ಸರಕಾರವು 100 ದಿನಗಳ ಆಡಳಿತ ಅವಧಿಯಲ್ಲಿ 5 ಗ್ಯಾರಂಟಿ ಅನುಷ್ಠಾನವನ್ನೇ ವಿಷಯವನ್ನಾಗಿ ಮಾಡಿಕೊಂಡು ಸಂಭ್ರಮಕ್ಕೆ ಮುಂದಾಗಿದೆ. ಸರಕಾರವು ರಾಜ್ಯದಲ್ಲಿ ಸಮಸ್ಯೆಗಳೇ ಇಲ್ಲ ಎಂಬಂತೆ ಸಂಭ್ರಮದಲ್ಲಿ ತೊಡಗಿದೆ ಎಂದು ಅವರು ಟೀಕಿಸಿದ್ದಾರೆ.

ರಾಜ್ಯದಲ್ಲಿ ನೂರಾರು ಸಮಸ್ಯೆಗಳ ಸರಮಾಲೆ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆಕೊಟ್ಟಿದೆ. ನಾಳೆ ರಾಜ್ಯಾದ್ಯಂತ ಹೋರಾಟ ನಡೆಯಲಿದೆ. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಬೆಂಗಳೂರಿನ ಎಲ್ಲ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Related posts