ಬೆಂಗಳೂರು: ಭಾರತದಲ್ಲಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನ ಪರಿಹಾರಗಳನ್ನು ಜಗತ್ತಿನ ಬೇರೆ ದೇಶಗಳಿಗೆ ತಲುಪಿಸಲು ಇದು ಸೂಕ್ತ ಸಮಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.
ಇದೇ ಮೊತ್ತಮೊದಲ ಬಾರಿಗೆ ವರ್ಚ್ಯುಯಲ್ ಆಗಿ ನಡೆಯಲಿರುವ ಮೂರು ದಿನಗಳ “ಬೆಂಗಳೂರು ತಂತ್ರಜ್ಞಾನ ಮೇಳ” (ಬಿಟಿಎಸ್-2020)ವನ್ನು ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
“ಡಿಜಿಟಲ್ ಇಂಡಿಯಾ” ಎಂಬುದು ಈಗ ಕೇವಲ ಸರ್ಕಾರದ ಅಭಿಯಾನವಾಗಿ ಉಳಿದಿಲ್ಲ. ಇದು ಬದುಕಿನ ರೀತಿಯೇ ಆಗಿ ಹೋಗಿದೆ. ಡಿಜಿಟಲ್ ತಂತ್ರಜ್ಞಾನವು ಜನರಿಗೆ ಪಾರದರ್ಶಕ ರೀತಿಯಲ್ಲಿ ತ್ವರಿತವಾಗಿ ಸೇವೆಗಳನ್ನು ತಲುಪಿಸಲು ಅನುವು ಮಾಡಿಕೊಡುತ್ತಿದೆ. ವಿಶೇಷವಾಗಿ ಆರ್ಥಿಕವಾಗಿ ದುರ್ಬಲರಾದವರಿಗೆ, ನಿರ್ಲಕ್ಷಿತ ಸಮುದಾಯಗಳಿಗೆ ಹಾಗೂ ಸರ್ಕಾರಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಇದಕ್ಕಾಗಿ ನಾವು “ಡಿಜಿಟಲ್ ಇಂಡಿಯಾ”ಗೆ ಧನ್ಯವಾದ ಸಲ್ಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಕೋವಿಡ್ ಸೋಂಕಿನ ಸನ್ನಿವೇಶದಲ್ಲಿ ರೂಢಿಗೆ ಬಂದ “ಎಲ್ಲಿಂದಾದರೂ ಕೆಲಸ ಮಾಡಿ” ಎಂಬ ಪರಿಕಲ್ಪನೆಯು ಇನ್ನು ಮುಂದೆಯೂ ಉಳಿದುಕೊಳ್ಳಲಿದೆ. ಶಿಕ್ಷಣ, ಆರೋಗ್ಯಸೇವೆ, ಶಾಪಿಂಗ್ ಸೇರಿದಂತೆ ಹಲವು ವಲಯಗಳಲ್ಲಿ ತಂತ್ರಜ್ಞಾನದ ಆನ್ವಯಿಕತೆಯು ಹೆಚ್ಚಾಗಲಿದೆ. ಯಾವ ಬದಲಾವಣೆಯು ಈ ಮುಂಚೆ ಕನಿಷ್ಠ 10 ವರ್ಷಗಳನ್ನು ಹಿಡಿಯುತ್ತಿತ್ತೋ ಅದು ಕೋವಿಡ್ ಸನ್ನಿವೇಶದಲ್ಲಿ ತಾಂತ್ರಿಕ ಬಳಕೆಯಿಂದ ಕೆಲವೇ ತಿಂಗಳುಗಳಲ್ಲಿ ಆಗಿದೆ ಎಂದರು.
ನಮ್ಮ ದೇಶವು ಅಭಿವೃದ್ಧಿಯಲ್ಲಿ ಮನುಷ್ಯ ಕೇಂದ್ರಿತ ಧೋರಣೆಯನ್ನು ಅನುಸರಿಸುತ್ತಿದೆ. ತಂತ್ರಜ್ಞಾನವು ಪ್ರಜೆಗಳ ಬದುಕಿನಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಅದರ ಲಾಭಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಸರ್ಕಾರವು ಡಿಜಿಟಲ್ ಮತ್ತು ತಾಂತ್ರಿಕ ಪರಿಹಾರಗಳಿಗೆ ಮಾರುಕಟ್ಟೆ ಸೃಷ್ಟಿಸುತ್ತಿದೆ. ಜೊತೆಗೆ ತಂತ್ರಜ್ಞಾನವನ್ನು ಎಲ್ಲಾ ಯೋಜನೆಗಳ ಪ್ರಮುಖ ಭಾಗವಾಗಿಸಿದೆ. “ತಂತ್ರಜ್ಞಾನ ಮೊದಲು” ಎಂಬುದು ತಮ್ಮ ಆಡಳಿತದ ಮಾದರಿಯಾಗಿದೆ. ತಂತ್ರಜ್ಞಾನದ ಬಳಕೆಯಿಂದ ಮನುಷ್ಯ ಬದುಕಿನ ಘನತೆಯನ್ನು ಉನ್ನತಿಗೇರಿಸಲಾಗಿದೆ. ಇಂತಹ ಉದಾಹರಣೆ ಪ್ರಪಂಚದಲ್ಲಿ ಬೇರೆಡೆ ಸಿಗುವುದು ಕಷ್ಟಸಾಧ್ಯ ಎಂದು ಪ್ರಧಾನಿ ವಿವರಿಸಿದರು.
ಕೇಂದ್ರ ಸರ್ಕಾರವು ಪ್ರಪಂಚದ ಅತ್ಯಂತ ದೊಡ್ಡ ಆರೋಗ್ಯ ಸೇವಾ ಯೋಜನೆಯಾದ “ಆಯುಷ್ಮಾನ್ ಭಾರತ”ವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ತಂತ್ರಜ್ಞಾನದ ಬಳಕೆಯಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಕೋವಿಡ್ ಸಂಕಷ್ಟದ ವೇಳೆ ಕೋಟ್ಯಂತರ ಜನರಿಗೆ ಕೇವಲ ಒಂದು ಕ್ಲಿಕ್ ಮೂಲಕ ಆರ್ಥಿಕ ನೆರವು ಒದಗಿಸಲು ಸಾಧ್ಯವಾಯಿತು. ತಂತ್ರಜ್ಞಾನವು ಜನರನ್ನು ಒಗ್ಗೂಡಿಸುವಲ್ಲಿ ನೆರವಾಗಿದೆ ಎಂದು ಹೇಳಿದರು.