ಬೆಂಗಳೂರು: ಉದ್ಯಾನ ನಗರಿಯಲ್ಲಿ ನಡೆಯುತ್ತಿರುವ ಟೆಕ್ ಸಮಿಟ್ ವೈವಿಧ್ಯಮಯ ವಿಚಾರಗಳಿಂದಾಗಿ ಜಾಗತಿಕ ಗಮನಸೆಳೆದಿದೆ.
ಟೆಕ್ ಸಮಿಟ್‌ನಲ್ಲಿ ಮೂರು ದಿನಗಳ ಕಾಲ ವಿವಿಧ ವರ್ಚುಯಲ್ ವೇದಿಕೆಗಳಲ್ಲಿ ನಡೆಯುತ್ತಿರುವ ಚರ್ಚಾಗೋಷ್ಠಿಗಳಲ್ಲಿ ದೇಶ-ವಿದೇಶಗಳ ಹೂಡಿಕೆದಾರರು, ತಾಂತ್ರಿಕ ನಿಪುಣರು, ವಿವಿಧ ಕಂಪನಿಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ನವೆಂಬರ್ 19ರಂದು ಮಹೀಂದ್ರಾ ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರ ಮುಖ್ಯ ಭಾಷಣ ಮಾಡಿದರಲ್ಲದೆ, ಕೋವಿಡ್ ನಂತರದ ಕಾಲದಲ್ಲಿ ಕರ್ನಾಟಕ ಮತ್ತು ಭಾರತದಲ್ಲಿರುವ ಹೂಡಿಕೆ ಅವಕಾಶಗಳ ಬಗ್ಗೆ, ಮುಖ್ಯವಾಗಿ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಮೇಲೆ ಬೆಳಕು ಚೆಲ್ಲಿದರು.
ಇದಾದ ಮೇಲೆ 4 ಚರ್ಚಾಗೋಷ್ಠಿಗಳು ನಡೆದು, ಅನೇಕ ಹೊಸ ಸಾಧ್ಯತೆಗಳತ್ತ ಗಮನ ಸೆಳೆಯುವಂತೆ ಮಾಡಿದವು. ಮಧ್ಯಾಹ್ನ ನಡೆದ ಮೊದಲ ಗೋಷ್ಠಿಯಲ್ಲಿ ನಿತ್ಯಜೀವನದಲ್ಲಿ ಟೆಕ್ನಾಲಜಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ಆರೋಗ್ಯ, ಕೃಷಿ ಮತ್ತು ಪ್ರಕೃತಿ ವಿಕೋಪದಂಥ ಸಂದತ್ಭದಲ್ಲಿ ದ್ರೋಣ್‌ಗಳನ್ನೂ, ರೋಬೋಟ್‌ಗಳನ್ನು ಬಳಸಿಕೊಳ್ಳುವ ಬಗ್ಗೆ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ಬಗ್ಗೆಯೂ ಮಾತುಕತೆ ನಡೆಯಿತು.
ಬಳಿಕ ಸಮಾಜ ಮತ್ತು ಸ್ಯಾಟಲೈಟ್‌ಗಳು, ಹೊಸದಾಗಿ ಜಗತ್ತನ್ನು ಪೀಡಿಸುತ್ತಿರುವ ಮಾರಣಾಂತಕ ವೈರಸ್‌ಗಳ ವಿರುದ್ಧ ವ್ಯಾಕ್ಸಿನ್-ಔಷಧಗಳ ಆವಿಷ್ಕಾರ, ಡಿಜಿಟಲ್ ಹೆಲ್ತ್‌ಕೇರ್ ಮುಂತಾದ ಅಂಶಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಅಂಕಿ- ಅಂಶಗಳಲ್ಲೇ ಬೆರಗು ಮೂಡಿಸುತ್ತಿರುವ ಈ ವರ್ಚುವಲ್ ಸಮಿಟ್ ಆ ಎಲ್ಲ ಅಂಕಿ- ಆಂಶಗಳನ್ನೂ ನೈಜವಾಗಿ ಸಾಕಾರಗೊಳಿಸುತ್ತಿದೆ. ಜಗತ್ತಿನ ಒಟ್ಟು 25 ಪಾಲುದಾರ ದೇಶಗಳು ಪಾಲ್ಗೊಂಡಿವೆ. ಒಟ್ಟು 75 ಅಧಿವೇಶನಗಳಲ್ಲಿ ಸುಮಾರು 270 ಮಂದಿ ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಆವಿಷ್ಕಾರ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುಮಾರು 100ಕ್ಕೂ ಹೆಚ್ಚು ನವೋದ್ಯಮಗಳು ಸೇರಿದಂತೆ 250 ಪ್ರದರ್ಶನಗಳನ್ನು ಕೂಡ ಏರ್ಪಡಿಸಲಾಗಿದೆ. ಮತ್ತೊಂದು ದೊಡ್ಡ ದಾಖಲೆ ಎನ್ನುವಂತೆ ವಿವಿಧ ದೇಶಗಳ 4000ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 20 ಸಾವಿರಕ್ಕೂ ಹೆಚ್ಚು ಬಿಸಿನೆಸ್ ವಿಸಿಟರುಗಳು ವರ್ಚುವಲ್ ವೇದಿಕೆಯ ಮೂಲಕವೇ ಸಮಿಟ್‌ಗೆ ಭೇಟಿ ನೀಡುತ್ತಿದ್ದಾರೆ.