ಬೆಂಗಳೂರು: ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದರು.
ದಕ್ಷ ಆಡಳಿತಕ್ಕೆ ಹೆಸರಾದ ನಾಡುಕಂಡ ಶ್ರೇಷ್ಠ ರಾಜಕಾರಣಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು. ಅಪಾರ ಅನುಭವವುಳ್ಳ ಹಿರಿಯ ಮುತ್ಸದ್ದಿಗಳಾಗಿರುವ ತಾವು ಮಾರ್ಗದರ್ಶನ ಮಾಡಬೇಕೆಂದು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಎಂ.ಕೃಷ್ಣಪ್ಪನವರು, ಶ್ರೀ ಸಿ.ಕೆ.ರಾಮಮೂರ್ತಿ ಅವರು… pic.twitter.com/xpYMWqixpp
— Vijayendra Yediyurappa (Modi Ka Parivar) (@BYVijayendra) November 13, 2023
ಇದೇವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಎಸ್.ಎಂ.ಕೃಷ್ಣ ಅವರು, ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಹತ್ತಾರು ವರ್ಷಗಳಿಂದ ಬಿಜೆಪಿಯನ್ನು ಕರ್ನಾಟಕದಲ್ಲಿ ಭದ್ರವಾದ ಬುನಾದಿಯ ಮೇಲೆ ಕಟ್ಟಲು ಯಡಿಯೂರಪ್ಪನವರು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಅವರು ಕಟ್ಟಿದ ಅಸ್ಥಿಭಾರದ ಮೇಲೆ ವಿಜಯೇಂದ್ರ ಅವರು ಬೃಹತ್ ಪಕ್ಷವನ್ನು ಕಟ್ಟುವ ಹಾಗೂ ಮುಂದಿನ ಲೋಕಸಭಾ ಚುನಾವಣೆ, ನಂತರ ಬರುವ ಸ್ಥಳೀಯ ಚುನಾವಣೆಗಳಲ್ಲಿ ತಮ್ಮ ಛಾಪನ್ನು ಒತ್ತಿ ತೋರಿಸುವ ದೊಡ್ಡ ಜವಾಬ್ದಾರಿ ಹೊರಲಿದ್ದಾರೆ. ಈ ಯುವ ಹೆಗಲಿನ ಮೇಲೆ ಅಂಥ ಹೊಣೆ ನೀಡಲಾಗಿದೆ. ಈ ಪ್ರತಿಭೆಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು, ಗೃಹ ಸಚಿವ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾರವರು ಮಹತ್ವದ ಹೊಣೆಯನ್ನು ನೀಡಿದ್ದಾರೆ. ವಿಜಯೇಂದ್ರರಿಗೆ ಎಲ್ಲ ವಿಧದ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಯುವಕರಿಗೆ ಅಧ್ಯಕ್ಷ ಸ್ಥಾನ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಂದಲ್ಲ ನಾಳೆ ಯುವ ಪ್ರತಿಭೆಗಳು ಹೊರಹೊಮ್ಮಬೇಕು. ಅವರ ಜೊತೆ ಹಿರಿಯರು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಅದಕ್ಕೆ ನಾವು ಅನುವು ಮಾಡಿಕೊಟ್ಟು ಅವರ ಕೈಗಳನ್ನು ಬಲಪಡಿಸಬೇಕು; ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು. ಶಾಸಕರಾದ ಕೃಷ್ಣಪ್ಪ, ಸಿ.ಕೆ.ರಾಮಮೂರ್ತಿ ಅವರು ಈ ಸಂದರ್ಭದಲ್ಲಿ ಇದ್ದರು.