ಬೆಂಗಳೂರು: ‘ವಿಧಾನ ಪರಿಷತ್ತಿನಲ್ಲಿ ಮಾತನಾಡುವ ಸಂದರ್ಭದಲ್ಲಿ, ನಾನು ಯಾವುದೇ ಅಸಂಸದೀಯ, ಮಾನಹಾನಿಕರ ಪದಬಳಕೆ ಮಾಡಿಲ್ಲ. ನನ್ನ ನಿಲುವಿನಲ್ಲಿ ನಾನು ಸ್ಪಷ್ಟವಾಗಿದ್ದೇನೆ’ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ.
ಭಾರತದ ಪ್ರಧಾನ ಮಂತ್ರಿಯ ಹುದ್ದೆ ಎನ್ನುವುದು ಒಂದು ಉನ್ನತವಾದ, ಪಕ್ಷಾತೀತವಾದ ಸಂಸದೀಯ ಹುದ್ದೆ. ಯಾವ ಪಕ್ಷದ ನಾಯಕ ಪ್ರಧಾನಿಯಾಗಿದ್ದರೂ, ಅವರು ಸಮಸ್ತ ದೇಶದ ಪ್ರಧಾನಿ. ಆ ಸ್ಥಾನವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಸಮರ್ಥರಲ್ಲದಿದ್ದರೆ, ದೇಶದ ಜನರು ಸತತವಾಗಿ ಮೂರು ಅವಧಿಗೆ ಎನ್ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರುತ್ತಿತ್ತೇನು? ಪ್ರಧಾನಿಯವರ ಕುರಿತು ಕಾಂಗ್ರೆಸ್ ನಾಯಕರು ಆಡಿರುವ ಅಗೌರವದ ಮಾತುಗಳು ಸಮಸ್ತ ದೇಶಕ್ಕೇ ಮಾಡಿರುವ ಅವಮಾನ’ ಎಂದು ಸಿ.ಟಿ.ರವಿ ಎದಿರೇಟು ನೀಡಿದ್ದಾರೆ.
ಸರ್ಕಾರದ ನಡೆಗಳನ್ನು ಟೀಕಿಸಿ, ಕ್ರಮಗಳನ್ನು ಟೀಕಿಸಿ. ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ, ಓರ್ವ ಪ್ರಧಾನಿಯ ಕುರಿತು ದೇಶದ್ರೋಹದ ಆರೋಪ ಮಾಡುತ್ತಾರೆಂದರೆ, ಕಾಂಗ್ರೆಸ್ ಹೈಕಮಾಂಡ್
ಎಷ್ಟರಮಟ್ಟಿಗೆ ಬೌದ್ಧಿಕ ದಿವಾಳಿತನ ಹೊಂದಿರಬಹುದು? ಎಷ್ಟರಮಟ್ಟಿಗೆ ಅಧಃಪತನಗೊಂಡಿರಬಹುದು? ಎಂದು ಸಿ.ಟಿ.ರವಿ ವಿಶ್ಲೇಷಿಸಿದ್ದಾರೆ.
