5.8 ಕೋಟಿ ಕಾರ್ಡ್ ರದ್ದು ಖಂಡಿಸಿ ಕೇಂದ್ರದ ವಿರುದ್ದ ಪ್ರತಿಭಟಿಸುತ್ತೀರ? ಬಿಜೆಪಿ ನಾಯಕರಿಗೆ ರಾಮಲಿಂಗಾ ರೆಡ್ಡಿ ತರಾಟೆ

ಬೆಂಗಳೂರು: ಕೇಂದ್ರ ಸರ್ಕಾರವು 5.8 ಕೋಟಿ ಕಾರ್ಡ್ ರದ್ದು ಮಾಡಲು ಹೊರಟಿರುವ ಬಗ್ಗೆ ಬಿಜೆಪಿ ನಾಯಕರು ಚಕಾರ ಎತ್ತುತ್ತಿಲ್ಲ ಆದರೆ ರಾಜ್ಯದಲ್ಲಿ BPL ರದ್ದಾಗಲ್ಲ ಎಂದು ಸಿಎಂ ಹೇಳಿದರೂ ಹೋರಾಟ ನಡೆಸುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ನಡೆ ಬಗ್ಗೆ ಸಾಮಾಜಿಕ ಜಾಲತಾಣ ‘X’ನಲ್ಲಿ ಕಟು ಟೀಕೆ ಮಾಡಿರುವ ರಾಮಲಿಂಗಾ ರೆಡ್ಡಿ, ಬಿಜೆಪಿಯವರು ಜನರನ್ನು ದಾರಿತಪ್ಪಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಚಾಳಿ ಹೊಂದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅರ್ಹರಾದವರಿಗೆ ಯಾವುದೇ ರೀತಿಯಿಂದಲೂ ಪಡಿತರ ಕಾರ್ಡ್ ರದ್ದಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹಾಗೂ ಮಾನ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಅನರ್ಹರು ಬಡವರ ಹೆಸರಿನಲ್ಲಿ ಕಾರ್ಡ್ ಹೊಂದಿದ್ದರೆ ಅವರ ಕಾರ್ಡ್ ಅನ್ನು ಮಾತ್ರ ರದ್ದು ಮಾಡಲಾಗುತ್ತದೆ. ಇಷ್ಟು ಸ್ಪಷ್ಟವಾಗಿ ಹೇಳಿದ್ದಾಗ್ಯೂ ಸಹ ಬಿಜೆಪಿಯವರಿಗೆ ವಿಷಯಾಂತರ ಮಾಡಿ ಜನರನ್ನು ದಾರಿತಪ್ಪಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಚಾಳಿ ಕರಗತವಾಗಿದೆ ಎಂದು ರಾಮಲಿಂಗ ರೆಡ್ಡಿ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ನೌಕರಿಯಲ್ಲಿದ್ದು ಬಿಪಿ‌ಎಲ್ ಕಾರ್ಡ್ ಪಡೆಯುವುದು ನ್ಯಾಯವೇ? ಎಂದು ಪ್ರಶ್ನಿಸಿರುವ ಸಚಿವರು, ಎಸ್.ಎಂ‌.ಕೃಷ್ಣ ರವರು ಮುಖ್ಯಮಂತ್ರಿಯಾಗಿದ್ದಾಗ 2003ರಲ್ಲಿ ತಾನು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವನಾಗಿ ನಗರ ಪ್ರದೇಶದಲ್ಲಿನ ಬಡವರಿಗೆ ಮೊದಲ ಬಾರಿಗೆ ಬಿ.ಪಿ.ಎಲ್ ಕಾರ್ಡ್ ವಿತರಿಸುವ ಯೋಜನೆ ಜಾರಿಗೆ ತಂದಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಅತೀ ಹೆಚ್ಚು ದಾಖಲೆ ಮಟ್ಟದ ರೇಷನ್ ಕಾರ್ಡ್ ಗಳನ್ನು ವಿತರಿಸಿದ್ದು ನನ್ನ ಮತ್ತು ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಎಂದು ಗಮನಸೆಳೆದಿದ್ದಾರೆ.

ನಮ್ಮದು ಬಡವರ ಪರ ಇರುವ ಸರ್ಕಾರ ಕಾರ್ಪೊರೇಟ್ ಪರ ಇರುವ ಸರ್ಕಾರ ಅಲ್ಲ ಎಂದಿರುವ ಅವರು, ಸದ್ದಿಲ್ಲದೇ ಕೇಂದ್ರ ಸರ್ಕಾರದಿಂದ ಪ್ರಹಾರ ನಡೆದಿದೆ. 5.8 ಕೋಟಿ ಕಾರ್ಡ್ ಗಳನ್ನು ರದ್ದು ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ಬಗ್ಗೆ ಚಕಾರವೆತ್ತುವ ಎದೆಗಾರಿಕೆ ಅವರಲ್ಲಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಬಿ.ಪಿ.ಎಲ್ ಕಾರ್ಡ್ ರದ್ದು ಕುರಿತಂತೆ ನಮ್ಮ ರಾಜ್ಯ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ರಾಜ್ಯ ಬಿಜೆಪಿಯ ಮಹಾನ್ ಹೋರಾಟಗಾರರೆಲ್ಲರೂ ಈಗ ಗಪ್-ಚುಪ್ ಎಂದು ಲೇವಡಿ ಮಾಡಿರುವ ಸಚಿವ ರಾಮಲಿಂಗಾ ರೆಡ್ಡಿ, ಪ್ರಹ್ಲಾದ್ ಜೋಷಿ, ವಿಜಯೇಂದ್ರ, ಅಶೋಕ್ , ಶೋಭಾ ಕರಂದ್ಲಾಜೆ ಇವರೆಲ್ಲಾ
ಕೇಂದ್ರದ ವಿರುದ್ಧ ಹೋರಾಟ ಮಾಡುವಿರಾ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿಯ ಅಧಿಕೃತ ಅಧ್ಯಕ್ಷರಾದ ವಿಜಯೇಂದ್ರ ಅವರನ್ನು ಕೆಳಗಿಳಿಸಲು ಆತುರದಲ್ಲಿರುವ ಬಿಜೆಪಿ ಬಂಡಾಯ ಗುಂಪಿನ ಅಧ್ಯಕ್ಷರಾದ ಬಸನಗೌಡ ಅವರೇ ಇದಕ್ಕೆ ಏನಂತಾರೆ ಎಂದು ಲೇವಡಿಮಾಡಿದ್ದಾರೆ.

‘ನಿಮ್ಮ ನಿಮ್ಮಲ್ಲೇ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಬಿಜೆಪಿ ನಾಯಕರೇ ಪ್ರಧಾನಿ ನಿವಾಸ 7-LKM ಮುಂದೆ ಧರಣಿ ಮಾಡಿ, ಬಿಪಿಎಲ್ ರದ್ದಾದ ಅರ್ಹರಿಗೆ ನ್ಯಾಯ ಕೊಡಿಸುವಿರಾ ಎಂದು ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Related posts