ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರಗತಿಪರ ಸಂಘಟನೆಗಳು ಹೋರಾಟದ ಅಖಾಡಕ್ಕೆ ಇಳಿದಿವೆ. ಸರ್ಕಾರಗಳ ನಡೆ ವಿರೋಧಿಸಿ ವಿರೋಧಿಸಿ ಕನ್ನಡ ಸಂಘಟನೆಗಳು, ರೈತಪರ ಸಂಘಟನೆಗಳು ಹಾಗೂ ಜಲಸಂರಕ್ಷಣಾ ಸಮಿತಿ ಇಂದು ಬೆಂಗಳೂರು ಬಂದ್ ಗೆ ಕರೆ ನೀಡಿವೆ.
ಬಂದ್ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿರುವ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಈ ನಡುವೆಯೂ ಪ್ರತಿಭಟನೆಗೆ ಮುಂದಾದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸಹಿತ 20ಕ್ಕೂ ಹೆಚ್ಚು ಮಂದಿಯನ್ನು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತ ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ಹೋರಾಟಗಾರರನ್ನು ಫೀಡಮ್ ಪಾರ್ಕ್ ಬಳಿ ಕಾರೋಡಿದು ಬಿಟ್ಟಿದ್ದಾರೆ. ಪ್ರತಿಭಟನೆ, ಹೋರಾಟಗಳನ್ನು ಸ್ವಾತಂತ್ರ್ಯ ಉದ್ಯಾನವನಕ್ಕೆ ಸೀಮಿತಗೊಳಿಸುವಂತೆ ಪೊಲೀಸರು ಮನವಿ ಮಾಡಿದರು.
ಆದರೆ ಪೊಲೀಸರ ಈ ಕ್ರಮಕ್ಕೆ ರೈತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಬಂದ್’ನ ದಿಕ್ಕು ತಪ್ಪಿಸುವ ಕೆಲಸವಾಗಬಾರದು. ಜಲ್ಲಿಕಟ್ಟು ಆದಾಗ ತಮಿಳುನಾಡು ಪೋಲಿಸರು ಸಹಕಾರ ನೀಡಿದರು. ಇಲ್ಲ ಪ್ರತಿಭಟನೆ ಮಾಡುವವರಿಗೆ ಕೆಲವೊಂದು ಸಮಸ್ಯೆ ಆಗುತ್ತಿದೆ ಎಂದು ರೈತ ನಾಯಕ ಕುರುಬೂರು ಶಾಂತಕುಮಾರ್ ಆಕ್ರೋಶ ಹೊರಹಾಕಿದರು. ಪೊಲೀಸರು ತಮ್ಮನ್ನು ವಶಕ್ಕೆ ಪಡೆದ ಕ್ರಮವನ್ನು ಖಂಡಿಸಿದ ಅವರು, ನಮ್ಮ ಬಂದ್ ತಡೆಯಲು 144 ಸೆಕ್ಷನ್ ಹಾಕಬಾರದಿತ್ತು. ಯಾವುದೇ ಕಾರಣಕ್ಕೂ ನಮ್ಮ ಹೋರಾಟ, ಚಳುವಳಿ ನಿಲ್ಲಲ್ಲ. ಪೋಲಿಸರು ಎಚ್ಚರಿಕೆಯಿಂದ ಇರಬೇಕು ಎಂದು ಕುರುಬೂರು ಶಾಂತಕುಮಾರ್ ಹೇಳಿದರು.