ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಆದೇಶದ ನಂತರ ಭಾರೀ ಪ್ರತಿಭಟನೆ ನಡೆಸುತ್ತಿರುವ ಕನ್ನಡಪರ ಸಂಘಟನೆಗಳು ಶುಕ್ರವಾರ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬಂದ್ ಕರೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸಹಿತ ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಇದೇ ವೇಳೆ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೆ ಬಂದಿದೆ. ಈ ಕುರಿತು ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದಿರುವ ಆಯುಕ್ತರು, ಕೋರ್ಟ್ ಆದೇಶದ ಪ್ರಕಾರ ಬಂದ್‌ಗೆ ಅವಕಾಶ ಇಲ್ಲ. ಹೀಗಾಗಿ ಶುಕ್ರವಾರವೂ ಪ್ರತಿಭಟನೆ ರ್ಯಾಲಿ ಮತ್ರ ನಡೆಸಬಹುದು ಎಂದಿದ್ದಾರೆ.
ಬಂದ್ ಹೆಸರಲ್ಲಿ ಬಲವಂತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸುವವರ ವಿರುದ್ದ ಹಾಗೂ ಸಾರ್ವಜನಿಕ ಜೀವನಕ್ಕೆ ಸಮಸ್ಯೆ ಉಂಟು ಮಾಡುವವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದವರು ಎಚ್ಚರಿಕೆ ನೀಡಿದ್ದಾರೆ.