ಬೆಂಗಳೂರು: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಗ್ಯಾಂಗ್ ಬಂಧನದಲ್ಲಿರುವಂತೆಯೇ ಮತ್ತಷ್ಟು ಮಂದಿಯ ಪಾತ್ರಗಳ ಬಗ್ಗೆ ಸಿಸಿಬಿ ಪೊಲೀಸರು ಜಾಲಾಡುತ್ತಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿರುವ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನ ಉದ್ಯಮಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸುವುದಾಗಿ ವಂಚಿಸಲಾಗಿದೆ ಎಂಬ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹಿಂದೂ ಕಾರ್ಯಕರ್ತೆ ಎಂದು ಘೋಷಿಸಿಕೊಂಡಿರುವ ಚೈತ್ರಾ ಕುಂದಾಪುರ, ಬಿಜೆಪಿ ನಾಯಕರಾಗಿದ್ದ ಗಗನ್ ಕಡೂರು, ಅಭಿನವ ಹಲಶ್ರೀ ಸ್ವಾಮೀಜಿ ಸೇರಿದಂತೆ ಆರು ಮಂದಿ ಇದೀಗ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾರೆ. ಇದೇ ಪ್ರಕರಣದಲ್ಲಿ ಹಿಂದುತ್ವವಾದಿ ಸ್ವಾಮೀಜಿ ಎಂದೇ ಬಿಂಬಿತವಾಗಿರುವ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೂ ಕೂಡಾ ಸಿಸಿಬಿ ನೋಟಿಸ್ ನೀಡಿದೆ.
ಈ ನಡುವೆ, ಈ ಪ್ರಕರಣಕ್ಕೂ ಸ್ವಾಮೀಜಿಗೂ ಯಾವುದೇ ಸಂಬಂಧವಿಲ್ಲ ಎಂಬ ವಿಚಾರ ಪೊಲೀಸರಿಗೂ ತಿಳಿದಿದೆ ಎನ್ನಲಾಗಿದ್ದು, ಆದರೂ ಟಿಕೆಟ್ ಡೀಲ್ ಪ್ರಕರಣ ವಿವಾದಕ್ಕೆ ತಿರುಗುವ ಮುನ್ನವೇ ಈ ಕುರಿತ ಮಾಹಿತಿ ಸ್ವಾಮೀಜಿಗೆ ಗೊತ್ತಿತ್ತು ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯಿಂದಲೂ ಮಾಹಿತಿ ಕಲೆಹಾಕುವ ಪ್ರಯತ್ನ ಪೊಲೀಸರದ್ದು. ಈ ಸಂಬಂಧ ಬೆಂಗಳೂರು ಸಿಸಿಬಿ ಪೊಲೀಸರು ರಾಜಶೇಖರಾನಂದ ಸ್ವಾಮೀಜಿ ಅವರಿಗೆ ನೋಟೀಸ್ ನೀಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಬಗ್ಗೆ ಈ ಹಿಂದೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ಸ್ವಾಮೀಜಿ, ಪೊಲೀಸರು ತಮ್ಮಿಂದ ಮಾಹಿತಿ ಬಯಸಿದರೆ ಅವರ ಮುಂದೆ ಹೇಳಿಕೆ ನೀಡುವುದಾಗಿ ತಿಳಿಸಿದ್ದರು. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕಿದೆ ಎಂದೂ ಸ್ವಾಮೀಜಿ ಪ್ರತಿಪಾದಿಸಿದ್ದರು.