ಆನ್ ಲೈನ್ ತರಗತಿಗಳಿಗೆ ಕೇಂದ್ರ ಸರ್ಕಾರ ಒತ್ತು; 100 ವಿವಿಗಳ ಆನ್ ಲೈನ್ ಕೋರ್ಸ್’ಗಳಿಗೆ ಅಸ್ತು

ದೆಹಲಿ: ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್’ಡೌನ್ ಜಾರಿಯಾದ್ದರಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್ ಕುರಿತಂತೆ ಕಳೆದ ಕೆಲ ದಿನಗಳಿಂದ ಸುದ್ದಿಗೋಷ್ಠಿ ಮೂಲಕ ಹಂಚಿಕೆಯ ವಿವರ ಒದಗಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮತ್ತಷ್ಟು ವರ್ಗಗಳಿಗೆ ಕೊಡುಗೆ ಪ್ರಕಟಿಸಿದ್ದಾರೆ.

ಉದ್ಯಮ ವಲಯಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಶ್ರಮಿಕರಿಗೂ ಈ ಬಾರಿ ಆರ್ಥಿಕ ನೆರವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ 2,000 ರೂಪಾಯಿ ನೇರ ವರ್ಗಾವಣೆ ಮಾಡಲಾಗಿದೆ. ದೇಶಾದ್ಯಂತ ಸುಮಾರು 8.19 ಕೋಟಿ ರೈತ ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ ಎಂದು ವಿವರ ಒದಗಿಸಿದರು.

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 3950 ಕೋಟಿ ರೂಪಾಯಿ ನೀಡಲಾಗಿದೆ. ಜನ್ ಧನ್ ಖಾತೆಗಳ ಮೂಲಕ 10,025 ಕೋಟಿ ರೂಪಾಯಿ ನೀಡಲಾಗಿದೆ. ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ನೆರವು ಪ್ರಕಟಿಸಲಾಗಿದೆ ಎಂದಿರುವ ಅವರು, ಆನ್ ಲೈನ್ ತರಗತಿಗಳಿಗಾಗಿ 12 ಹೆಚ್ಚುವರಿ ಚಾನಲ್ ಗಳ ಸೇರ್ಪಡೆ ಮಾಡಲಾಗಿದೆ. ಪಿಎಂ ಇ-ವಿದ್ಯಾ ಯೋಜನೆ ತಕ್ಷಣದಿಂದಲೇ ಜಾರಿ. ಆನ್ ಲೈನ್ ತರಗತಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 100 ವಿಶ್ವವಿದ್ಯಾನಿಲಯಗಳಿಗೆ ಆನ್ ಲೈನ್ ಕೋರ್ಸ್ ಪ್ರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಕೊರೋನಾ ಸಾಂಕ್ರಾಮಿಕ ರೋಗ ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯಗಳಿಗೆ 4113 ಕೋಟಿ ಬಿಡುಗಡೆ ಮಾಡಲಾಗಿದೆ ಎಂದ ಅವರು, 300ಕ್ಕೂ ಹೆಚ್ಚು ಪಿಪಿಇ ತಯಾರಕರಿಂದ ಈವರೆಗೆ 51 ಲಕ್ಷ ಪಿಪಿಇ ಕಿಟ್ಸ್ ಸರಬರಾಜು ಮಾಡಲಾಗಿದೆ ಎಂದು ಹಣಕಾಸು ಸಚಿವರು ಮಾಹಿತಿ ಹಂಚಿದರು.

ಮೋದಿ ಸರ್ಕಾರದ ಈ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ.

 

Related posts