ರಾಜ್ಯದಲ್ಲಿ ಸಿಇಟಿ ಕೌನ್ಸೆಲಿಂಗ್; ಜ.15ರವರೆಗೆ ಕಾಲಾವಕಾಶಕ್ಕೆ ಎಐಸಿಟಿಇ ಅನುಮತಿ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಎಂಜಿನಿಯರಿಂಗ್ ಕೋರ್ಸ್ ಗಳ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಜನವರಿ ಜ.15ರವರೆಗೆ ಕಾಲಾವಕಾಶ ವಿಸ್ತರಿಸಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿ (ಎಐಸಿಟಿಇ) ಅನುಮತಿ

ಈ ಹಿನ್ನೆಲೆಯಲ್ಲಿ, ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ನಡೆಸಲಾಗುವುದು. ಕೌನ್ಸೆಲಿಂಗ್ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಶೀಘ್ರವೇ ಪ್ರಕಟಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದರಿಂದ ಈಗಾಗಲೇ ಎಂಜಿನಿಯರಿಂಗ್ ಸೀಟು ಪಡೆದಿರುವವರಿಗೆ ಕೋರ್ಸ್ ಇಷ್ಟವಿಲ್ಲದಿದ್ದರೆ ಸೀಟುಗಳನ್ನು ವಾಪಸ್ಸು ಮಾಡಲು ಕೊನೆಯ ಬಾರಿಗೆ ಅವಕಾಶ ನೀಡಲಾಗುತ್ತದೆ. ಆದರೆ ಮುಂದೆ ನಡೆಯಲಿರುವ ಮಾಪ್-ಅಪ್ ಸುತ್ತಿನಲ್ಲಿ ಸೀಟು ಪಡೆದವರಿಗೆ ಅದನ್ನು ಹಿಂದಿರುಗಿಸಲು ಖಂಡಿತಾ ಅವಕಾಶ ಇರುವುದಿಲ್ಲ. ಅವರು ನಿಗದಿತ ಶುಲ್ಕ ಪಾವತಿಸಿ ಪ್ರವೇಶ ಪಡೆಯಲೇಬೇಕಾಗುತ್ತದೆ. ಇಲ್ಲದಿದ್ದರೆ ನಿಗದಿತ ಶುಲ್ಕದ ಐದು ಪಟ್ಟು ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ ಎಂದು ಅಶ್ವಥ್ಥ ನಾರಾಯಣ ಅವರು ಸ್ಪಷ್ಟಪಡಿಸದಿದ್ದಾರೆ.

ವೃತ್ತಿಪರ ಕೋರ್ಸ್ ಗಳ ಖಾಲಿ ಇರುವ ಸೀಟುಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ಮಾಡುವ ಅಗತ್ಯ ಇದ್ದು, ಜನವರಿ 15ರವರೆಗೆ ಅವಕಾಶ ನೀಡಬೇಕು ಎಂದು ಕೋರಿ ಉನ್ನತ ಶಿಕ್ಷಣ ಇಲಾಖೆಯು ಎಐಸಿಟಿಇ ಅಧ್ಯಕ್ಷರಿಗೆ ಪತ್ರ ಬರೆದಿತ್ತು. ಅದಕ್ಕೆ ಸ್ಪಂದಿಸಿರುವ ಎಐಸಿಟಿಇ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಕಾಲಾವಕಾಶ ವಿಸ್ತರಿಸಿ ಅನುಮತಿ ನೀಡಿದೆ.

ಉಳಿದಿರುವ ವೃತ್ತಿಪರ ಕೋರ್ಸ್ ಗಳ ಸೀಟ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಸಲ, ಕೊನೆಯದಾಗಿ ಅವಕಾಶ ನೀಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಇದರ ಜೊತೆಗೆ, ಕರ್ನಾಟಕ ಅನುದಾನರಹಿತ ಖಾಸಗಿ ಶೈಕ್ಷಣಿಕ ಕಾಲೇಜುಗಳ ಸಂಸ್ಥೆ (ಕೆಯುಪಿಇಸಿಎ) ಕೂಡ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಜನವರಿ 15ರವರೆಗೆ ಕಾಲಾವಕಾಶ ವಿಸ್ತರಿಸಲು ಕೋರಿತ್ತು. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಪತ್ರ ಬರೆದಿತ್ತು.

ಈ ಮುಂಚೆ ನೀಡಿದ್ದ ಅನುಮತಿ ಪ್ರಕಾರ ರಾಜ್ಯದಲ್ಲಿ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ 31-12-2020 ಕೊನೆಯ ದಿನವಾಗಿತ್ತು.

Related posts