ಚೈತ್ರಾ ಕೇಸ್; ಹೆಜ್ಜೆ ಜಾಡು ಬೆನ್ನತ್ತಿ ಕೋಟಿ ರೂಪಾಯಿ ಆಸ್ತಿ ದಾಖಲೆ, ಝಣ-ಝಣ ಕಾಂಚಾಣ ಪತ್ತೆ ಮಾಡಿದ ರೀನಾ ಟೀಮ್

ಬೆಂಗಳೂರು: ಬೆಂಗಳೂರಿನ ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡುವುದಾಗಿ ನಂಬಿಸಿ ವಂಚಿಸಿರುವ ಆರೋಪದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಅವರಿಗೆ ಸೇರಿದ್ದೆನ್ನಲಾದ ಚಿನ್ನಾಭರಣ, ನಗದು ಸಹಿತ ಆಸ್ತಿ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಬಂಡೆಪಾಳ್ಯದಲ್ಲಿ ದಾಖಲಾಗಿರುವ ಈ ಪ್ರಕರಣ ಕುರಿತಂತೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ಸರಣಿ ಕಾರ್ಯಾಚರಣೆ ಸಾಗಿದೆ. ಇದೇ ಸಂದರ್ಭದಲ್ಲಿ ಸರ್ಚ್ ವಾರೆಂಟ್ ಪಡೆದು ಅಖಾಡಕ್ಕೆ ಧುಮುಕಿರುವ ರೀನಾ ಸುವರ್ಣ ನೇತೃತ್ವದ ಸಿಸಿಬಿ ತಂಡ ಕರಾವಳಿಜಿಲ್ಲೆಯಲ್ಲಿ ನಡೆಸಿರುವ ಕಾರ್ಯಾಚರಣೆ ಕುತೂಹಲದ ಕೇಂದ್ರಬಿಂದುವಾಯಿತು.

3.5 ಕೋಟಿ ರೂಪಾಯಿ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಗ್ಯಾಂಗ್ ಆ ಹಣವನ್ನು ಎಲ್ಲಿ ಇಟ್ಟಿದೆ ಎಂಬ ಬಗ್ಗೆ ಶೋಧನೆಗಿಳಿದಿರುವ ಈ ಪೊಲೀಸರು, ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿಗೆ ತೆರಳಿ ತನಿಖೆ ಕೈಗೊಂಡಿದೆ. ಬ್ಯಾಂಕ್ ಲಾಕರ್​ನಲ್ಲಿ ಇಟ್ಟಿದ್ದ ಆಸ್ತಿ ಪತ್ರ, ಬಂಗಾರವನ್ನು ಪತ್ತೆ ಮಾಡಿದೆ. ಸುಮಾರು 1.8 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ರ, 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ 40 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚೈತ್ರಾ ಕುಂದಾಪುರ ಅವರು ಬ್ಯಾಂಕ್​ನಲ್ಲಿ ತಮ್ಮ ಸಹಚರ ಶ್ರೀಕಾಂತ್ ಹೆಸರಿನಲ್ಲಿ ಹಣ, ಚಿನ್ನ ಇಟ್ಟಿದ್ದರೆನ್ನಲಾಗಿದ್ದು, ಇದರ ಜೊತೆಯಲ್ಲೇ ಉಡುಪಿಯ ಹಿರಿಯಡ್ಕದಲ್ಲಿ ಶ್ರೀಕಾಂತ್ ಹೆಸರಲ್ಲಿ ಮನೆ ಕಟ್ಟಿಸುತ್ತಿದ್ದರು ಎಂಬ ಮಾಹಿತಿಯನ್ನೂ ಪೊಲೀಸರು ಕಲೆಹಾಕಿದ್ದಾರೆ. ಹಿರಿಯಡ್ಕದಲ್ಲಿ 20 ಸೆಂಟ್ಸ್ ಜಾಗ ಖರೀದಿಸಿ ಮನೆ ಕಟ್ಟಿಸುತ್ತಿರುವ ಬಗ್ಗೆ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ.

Related posts