ಜಿಂಕೆ ಕೊಂಬು ಅಕ್ರಮ ಸಾಗಾಟ; ಚಾಮರಾಜನಗರ ಬಳಿ ಇಬ್ಬರ ಬಂಧನ

ಚಾಮರಾಜನಗರ: ಹನೂರು ಸಮೀಪ ಅಕ್ರಮವಾಗಿ ಶೇಖರಣೆ ಮಾಡಿದ್ದ ಜಿಂಕೆ ಕೊಂಬುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ. ಹನೂರು ತಾಲೂಕಿನ ಹುಣಸೆಪಾಳ್ಯ ಗ್ರಾಮದ ನಿವಾಸಿಗಳಾದ ಈರಣ್ಣ (49) ಆರ್ಯ (22) ಬಂಧಿತ ಆರೋಪಿಗಳಾಗಿದ್ದಾರೆ.

ಹುಣಸೆಪಾಳ್ಯ ಗ್ರಾಮದ ಇಬ್ಬರು ವ್ಯಕ್ತಿಗಳು ಒಡೆಯರಪಾಳ್ಯ ಕಡೆಯಿಂದ ಕೊಳ್ಳೇಗಾಲ ಮಾರ್ಗವಾಗಿ ಹೋಂಡಾ ಶೈನ್ ಮೋಟಾರ್ ಬೈಕ್‌ನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಜಿಂಕೆ ಕೊಂಬುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರದಳದ ಸಬ್ಇನ್ಸ್ಪೆಕ್ಟರ್ ವಿಜಯ್ ರಾಜ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ 12 ಒಣಗಿದ ಜಿಂಕೆ ಕೊಂಬು, ಕೃತಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ಕೆಎ-10 U 4034 ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಕೊಳ್ಳೆಗಾಲ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಪೇದೆಗಳಾದ ಸ್ವಾಮಿ, ರಾಮಚಂದ್ರ, ಶಂಕರ್, ಬಸವರಾಜು ಪೇದೆ ಬಸವರಾಜು ಸಹಿತ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Related posts