ಹನೂರು: ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯು ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 77 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ದ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ವೈ ಕೆ ಗುರುಪ್ರಸಾದ್, ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ಮಹನೀಯರ ಕೊಡುಗೆ ಇದೆ. ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ವೀರ ಯೋಧರು ಮತ್ತು ಹೋರಾಟಗಾರರನ್ನು ಸ್ಮರಣೆ ಮಾಡುವ ಸುದಿನ. ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವ ಮೂಲಕ ದೇಶ ಪ್ರೇಮವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕು. ಹನೂರು ಶೈಕ್ಷಣಿಕವಾಗಿ ಜಿಲ್ಲೆಯಲ್ಲೇ ಉನ್ನತ ಮಟ್ಟದ ಸಾಧನೆ ಮಾಡುತ್ತಿದೆ. ಈ ಮಹಾನ್ ಕಾರ್ಯದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರ ಪಾತ್ರ ಮಹತ್ತರವಾಗಿದೆ ಅವರಿಗೆ ಅಭಿನಂದನೆಗಳು ಎಂದರು.
ಶಾಸಕ ಎಂಆರ್ ಮಂಜುನಾಥ್ ಮಾತನಾಡಿ ಸ್ವಾತಂತ್ರಗಳಿಸಲು ಅನೇಕ ಮಹನೀಯರು ತಮ್ಮ ಪ್ರಾಣ ಮತ್ತು ಬಲಿದಾನವನ್ನು ಮಾಡಿದ್ದಾರೆ. ಸ್ವಾತಂತ್ರದ ನಂತರ ಡಾ. ಬಿ. ಆರ್. ಅಂಬೇಡ್ಕರ್ ಅವರ ನಾಯಕತ್ವದಲ್ಲೇ ರಚನೆಯಾದ ಸಂವಿಧಾನದ ಮೂಲಕ ಸದೃಢ ಭಾರತ ವಾಗಿ ನಿರ್ಮಾಣವಾಗಿದೆ ಎಂದರು.
ಇದೇ ವೇಳೆ, ವಿವಿಧ ಶಾಲೆಗಳ ಮಕ್ಕಳಿಂದ ದೇಶಭಕ್ತಿ ಸಾರುವ ನೃತ್ಯರೂಪಕ ಗಮನಸೆಳೆಯಿತು. ಗೌತಮ ಶಾಲೆಯ ವಿದ್ಯಾರ್ಥಿಗಳು ಗೀತಾ ಗಾಯನ ಮತ್ತು ನಾಟಕ, ಮಂಗಲ ಏಕಲವ್ಯ ಶಾಲೆ, ಪಟ್ಟಣದ ಕ್ರಿಸ್ತರಾಜ ಶಾಲೆ, ವಿವೇಕಾನಂದ ಶಾಲೆ, ಜಿ. ವಿ.ಗೌಡ ಶಾಲೆ, ಬಿ. ಎಂ. ಜಿ.ಶಾಲೆ, ಹೋಲಿ ಏಂಜಲ್ ಶಾಲೆ, ಮೊರಾರ್ಜಿ ವಸತಿ ದೇಸಾಯಿ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಕಣ್ಮನ ಸೆಳೆಯಿತು.
ದರ್ಶ್ ಶಾಲೆಯು ನೂತನವಾಗಿ ಸ್ಥಾಪನೆಗೊಂಡಿದ್ದು 77ನೇ ಸ್ವಾತಂತ್ರ್ಯ ದಿನದಂದು ವಿದ್ಯಾರ್ಥಿಗಳು ಚೊಚ್ಚಲ ಪ್ರದರ್ಶನವನ್ನು ನೀಡಿ ಪ್ರೇಕ್ಷಕರ ಮನಸೆಳೆಯಿತು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹನೂರು ತಾಲ್ಲೂಕಿನ 4 ಮಕ್ಕಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.
ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಮಾಜಿ ಸೈನಿಕರಾದ ಎಂ ವೆಂಕಟರಾಮನ್ ರವರನ್ನು ಸನ್ಮಾನಿಸಲಾಯಿತು.
ವೆಂಕಟರಾಮನ್ ರವರು 1963 ರಲ್ಲಿ ಸೇನೆಗೆ ಸೇರಿಕೊಂಡು 1979ರಲ್ಲಿ ನಿವೃತ್ತಿ ಹೊಂದಿದರು, ಇವರ ಸೇವೆ ಅವಧಿಯಲ್ಲಿ 1963 ರಲ್ಲಿ ಚೀನಾ ಮತ್ತು ಭಾರತ ದೇಶದ ಯುದ್ಧದಲ್ಲಿ ಭಾಗಿಯಾಗಿದ್ದರು , 1965 ರಲ್ಲಿ ಪಾಕಿಸ್ತಾನ ಮತ್ತು ಇಂಡಿಯಾ ಯುದ್ಧದಲ್ಲಿ ಹಾಗೂ 1971ರಲ್ಲಿ ಬಾಂಗ್ಲಾದೇಶ ಮತ್ತು ಇಂಡಿಯಾ ಯುದ್ಧದಲ್ಲಿ ಭಾಗವಹಿಸಿದ್ದರು. ಇವರು 7 ಬಾರಿ ರಾಷ್ಟ್ರಪತಿ ಪದಕವನ್ನು ಪಡೆದುಕೊಂಡಿದ್ದಾರೆ.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಗಿರೀಶ್ ಸದಸ್ಯರುಗಳಾದ ಹರೀಶ್ ಸಂಪತ್ ಕುಮಾರ್, ಮಹೇಶ್ ಕುಮಾರ್, ಸುದೇಶ್, ಪವಿತ್ರ ,ಮಮ್ತಾಜ್ ಬಾನು, ಮಂಜುಳಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್ ,ಹನೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಶಿವಕುಮಾರ್ ,ಚೆಸ್ಕಾಂ ಎಇಇ ಶಂಕರ್ ಪಶುವೈದ್ಯಧಿಕಾರಿಯಾದ ಡಾ. ಸಿದ್ದರಾಜು ಸೇರಿದಂತೆ ಅನೇಕಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.