ಹಾಸನ: ಕರುನಾಡಿನ ಜೈನ ಸಮುದಾಯದ ಪ್ರೇರಕ ಶಕ್ತಿ, ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ವಿಧಿವಶರಾಗಿದ್ದಾರೆ. 73 ವರ್ಷ ಹರೆಯದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕೆಲಕಾಲದಿಂದ ಅನಾರೋಗ್ಯದಿಂದಿದ್ದರು. ಇಂದು ಬೆಳಿಗ್ಗೆ ಅವರು ಜಿನೈಕ್ಯರಾದರೆಂದು ಮೂಲಗಳು ತಿಳಿಸಿವೆ.
ಸುದೀರ್ಘ ಕಾಲದಿಂದ ಧಾರ್ಮಿಕ ಕೈಂಕರ್ಯದಲ್ಲಿ ಮುಂಚೂಣಿಯಲ್ಲಿದ್ದ ಶ್ರೀಗಳು ಕೆಲಸಮಯದಿಂದ ಅನಾರೋಗ್ಯ ಕಾರಣದಿಂದಾಗಿ ಶ್ರವಣಬೆಳಗೊಳದ ಮಠದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲೇ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಿನೈಕ್ಯರಾಗಿದ್ದಾರೆ ಎಂದು ಅವರ ಆಪ್ತರು ದುಃಖ ಹಂಚಿಕೊಂಡಿದ್ದಾರೆ.
ಶ್ರವಣಬೆಳಗೊಳ ಜೈನ ಮಠವು ಪ್ರಾಚೀನ ಧರ್ಮಪೀಠಗಳಲ್ಲೊಂದಾಗಿದೆ. ಇಲ್ಲಿನ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ದಕ್ಷಿಣ ಭಾರತದ ಆಸ್ತಿಕರ ಪಾಲಿಗೆ ಅತ್ಯಂತ ಪೂಜ್ಯರಾಗಿದ್ದರು. ಸುಮಾರು ಐದು ದಶಕಗಳ ಕಾಲ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದ ಸ್ವಾಮೀಜಿಯವರು ತಮ್ನದೇ ಆದ ಸೇವಾ ಕೈಂಕರ್ಯ ಮೂಲಕ ಜೈನ ಪರಂಪರೆಯನ್ನು ಬೆಳಗಿದ್ದರು.
ಇದೀಗ ಅವರು ವಿಧಿವಶರಾದ ಸುದ್ದಿ ಆಸ್ತಿಕರ ಪಾಲಿನಲ್ಲಿ ನೋವಿನ ಅಲೆಯನ್ನೇ ಎಬ್ಬಿಸಿದೆ.